ಕುಶಾಲನಗರ, ನ 20: ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI), ಕುಶಾಲನಗರ ನಗರ ಸಮಿತಿ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಪ್ರತಿಭಟಿಸಲಾಯಿತು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟಿಸಿದ ಎಸ್ ಡಿ ಪಿ ಐ ಕಾರ್ಯಕರ್ತರು, ಬೆಲೆ ಏರಿಕೆ ನಿಯಂತ್ರಣಕ್ಕೆ ಒತ್ತಾಯಿಸಿ ಘೋಷಣೆಗಳನ್ನು ಮೊಳಗಿಸಿದರು.
ಈ ಸಂದರ್ಭ ಮಾತನಾಡಿದ ನಗರ ಸಮಿತಿ ಅಧ್ಯಕ್ಷ ಹನೀಫ್, ಕೇಂದ್ರ ಮತ್ತು ರಾಜ್ಯ ಸರಕಾರಗಳು ಇಂಧನ ಸೇರಿದಂತೆ, ಬಸ್ ಪ್ರಯಾಣ ದರ ಹೆಚ್ಚಳ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರಿಗೆ ತೀವ್ರ ಅನಾನುಕೂಲ ಉಂಟುಮಾಡಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಅಧಿಕಾರಕ್ಕಾಗಿ ಜನರ ನಡುವೆ ಒಡಕು ಮೂಡಿಸಿ ಆಡಳಿತ ನಡೆಸುವುದನ್ನು ಬದಿಗೊತ್ತಿ ಜನಪರ ಆಡಳಿತ ಹಾಗೂ ಅಭಿವೃದ್ಧಿಯ ಚಿಂತನೆಗಳನ್ನು ಕೈಗೊಳ್ಳಬೇಕಿದೆ. ಕೂಡಲೆ ಬೆಲೆ ಏರಿಕೆ ನಿಯಂತ್ರಿಸಿ ಜನರಿಗೆ ಅನುಕೂಲ ಒದಗಿಸಬೇಕಿದೆ ಎಂದು ಆಗ್ರಹಿಸಿದರು.
ಜಿಲ್ಲಾ ಸಮಿತಿ ಸದಸ್ಯ ಜಕ್ರಿಯ ಮಾತನಾಡಿ,
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ಸಹಜವಾಗಿ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಆಗಿದೆ. ಕೇಂದ್ರ ಸರಕಾರ ಜನರ ಹಿತಾಸಕ್ತಿ ಬದಿಗೊತ್ತಿದರೂ ಪರವಾಗಿಲ್ಲ. ರಾಜ್ಯ ಸರಕಾರ ಜನರ ಬಗ್ಗೆ ಚಿಂತನೆ ಹರಿಸಬೇಕಿದೆ. ರಾಜ್ಯ ಜನಪ್ರತಿನಿಧಿಗಳು ಐಷಾರಾಮಿ ಜೀವನ ನಡೆಸುತ್ತಿದ್ದರೆ ಸಾಮಾನ್ಯ ಜನರು ಜೀವನ ನಡೆಸಲು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ನಾವೆಲ್ಲರೂ ಜಾತಿ, ಧರ್ಮ, ಪಕ್ಷ ಪ್ರೇಮವನ್ನು ಬದಿಗೊತ್ತಿ ಬೀದಿಗಿಳಿದು ಹೋರಾಟ ನಡೆಸಿ ಪ್ರಶ್ನೆ ಮಾಡುವ ಮನಸ್ಥಿತಿ ಬೆಳೆಸಿಕೊಂಡು ಸರಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದರು.
ಪ್ರತಿಭಟನೆಯಲ್ಲಿ
ಸಮಿತಿ ಉಪಾಧ್ಯಕ್ಷರಾದ ಬಾಷಾ ಮತ್ತು ಅಬ್ದುಲ್ಲಾ, ಕಾರ್ಯದರ್ಶಿ ನೂರುಲ್ಲಾ, ಪ್ರಮುಖರಾದ ಅಕ್ಮಲ್, ಸ್ವಾಲಿಹ್, ಶರೀಫ್,ಹುಸೈನ್, ಝಕರಿಯಾ, ರಝಾಕ್ ಮತ್ತಿತರರು ಇದ್ದರು.
Back to top button
error: Content is protected !!