ಸುಂಟಿಕೊಪ್ಪ, ಅ 09:
ಕಾಲೇಜು ಹಿಂಭಾಗದ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಮುಕ್ತಾಯ ಸಮಾರಂಭ ಹಾಗೂ ಗ್ರಾಮೀಣ ಒಕ್ಕೂಟದ ವತಿಯಿಂದ ಅಂಗನವಾಡಿ ಕೇಂದ್ರಗಳಿಗೆ ಕೊಡುಗೆ ನೀಡುವ ಕಾರ್ಯಕ್ರಮ ನಡೆಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಪ್ರಸನ್ನ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸೆಪ್ಟೆಂಬರ್ 9ರಿಂದ ಅಕ್ಟೋಬರ್ 8ರವರೆಗೆ ತಾಲೂಕಿನಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಮೇಲ್ವಿಚಾರಕರ ಮಾರ್ಗದರ್ಶನದಲ್ಲಿ ಪೋಷಣ್ ಮಾಸಾಚರಣೆಯನ್ನು ಉತ್ತಮವಾಗಿ ಆಯೋಜಿಸಿ, ಎಲ್ಲಾ ಫಲಾನುಭವಿಗಳಿಗೆ ಯೋಜನೆಗಳ ಮಾಹಿತಿ ತಲುಪಿಸುವಲ್ಲಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.
“ನಮ್ಮ ಅಂಗನವಾಡಿ, ನಮ್ಮ ಜವಾಬ್ದಾರಿ” ಎಂಬ ಘೋಷವಾಕ್ಯದೊಂದಿಗೆ ಆಹಾರದಲ್ಲಿ ವೈವಿಧ್ಯತೆ, ಪ್ರೋಟೀನ್ಯುಕ್ತ ಆಹಾರದ ಬಳಕೆ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಹಾಗೂ ಇಲಾಖೆಯ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸುವುದು, ಸೀಮಂತ ಕಾರ್ಯಕ್ರಮ, ರಾಸಾಯನಿಕ ಮುಕ್ತ ಆಹಾರ ಉತ್ಪಾದನೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಸಮುದಾಯದ ಸಹಭಾಗಿತ್ವ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಅಂಗನವಾಡಿ ಕೇಂದ್ರಗಳ ಸುತ್ತಮುತ್ತ ತರಕಾರಿ ಹಾಗೂ ಹಣ್ಣಿನ ಗಿಡಗಳನ್ನು ಬೆಳೆಸಿ, ಅವುಗಳನ್ನು ಮಕ್ಕಳ ಪೌಷ್ಟಿಕ ಆಹಾರಕ್ಕೆ ಬಳಸುವ ಮೂಲಕ ಅಪೌಷ್ಟಿಕತೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಪೌಷ್ಟಿಕ ಹಾಗೂ ಸಮತೋಲನ ಆಹಾರದ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಇಂದಿನ ದಿನಗಳಲ್ಲಿ ಮೊಬೈಲ್ ಫೋನ್ಗಳ ಅತಿಯಾದ ಬಳಕೆಯಿಂದ ಮಕ್ಕಳಲ್ಲಿ ಮಾನಸಿಕ ಹಾಗೂ ಸಾಮಾಜಿಕ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಪೋಷಕರು ಮಕ್ಕಳ ಮೊಬೈಲ್ ಬಳಕೆಯನ್ನು ನಿಯಂತ್ರಿಸಿ, ಅವರೊಂದಿಗೆ ಹೆಚ್ಚಿನ ಸಮಯ ಕಳೆಯಬೇಕು ಎಂದು ಸಲಹೆ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ಅವರು ಮಾತನಾಡಿ, ವಿವಿಧ ಬಣ್ಣಗಳ ಪೌಷ್ಟಿಕ ಆಹಾರ, ಸೊಪ್ಪು, ತರಕಾರಿ, ಹಣ್ಣುಗಳು ಹಾಗೂ ಸ್ಥಳೀಯ ಆಹಾರ ಪದಾರ್ಥಗಳನ್ನು ಬಳಸುವ ಮೂಲಕ ಅಪೌಷ್ಟಿಕತೆ ಮತ್ತು ರಕ್ತಹೀನತೆಯನ್ನು ತಡೆಗಟ್ಟಬಹುದು ಎಂದು ತಿಳಿಸಿದರು. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ಆರೋಗ್ಯವಂತ ಪೀಳಿಗೆಯನ್ನು ರೂಪಿಸಬೇಕು ಎಂದರು.
ಪೋಷಣ್ ಮಾಸಾಚರಣೆಯ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಅಂಗನವಾಡಿಗಳಿಗೆ ಗ್ರಾಮೀಣ ಒಕ್ಕೂಟದಿಂದ ಕೊಡುಗೆ
ಗ್ರಾಮೀಣ ಒಕ್ಕೂಟದ ಮ್ಯಾನೇಜರ್ ಮುರಳಿ ಹಾಗೂ ಸುಭಾಷ್ ಅವರು ಬೇಡಿಕೆಯ ಮೇರೆಗೆ ಕಾಲೇಜು ಹಿಂಭಾಗ ಮತ್ತು ಅಶೋಕಪುರ ಅಂಗನವಾಡಿ ಕೇಂದ್ರಗಳಿಗೆ 28 ಮಕ್ಕಳ ಕುರ್ಚಿಗಳು, ಎರಡು ದೊಡ್ಡವರ ಕುರ್ಚಿಗಳು ಹಾಗೂ ಜಮಖಾನವನ್ನು ಕೊಡುಗೆಯಾಗಿ ನೀಡಿದರು. ಇದೇ ಸಂದರ್ಭದಲ್ಲಿ ಗ್ರಾಮೀಣ ಒಕ್ಕೂಟದ ಚಟುವಟಿಕೆಗಳು ಹಾಗೂ ಸೇವೆಗಳ ಕುರಿತು ಫಲಾನುಭವಿಗಳಿಗೆ ಮಾಹಿತಿ ನೀಡಿದರು.
ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರು ಮಾತನಾಡಿ, ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳ ಮೂಲಭೂತ ಸೌಕರ್ಯಗಳ ಅಗತ್ಯಕ್ಕೆ ಅನುಗುಣವಾಗಿ ಗ್ರಾಮೀಣ ಒಕ್ಕೂಟ ಹಾಗೂ ಇತರ ಸಂಘ-ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಎರಡು ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದ ಗ್ರಾಮೀಣ ಒಕ್ಕೂಟಕ್ಕೆ ಇಲಾಖೆಯ ಪರವಾಗಿ ಧನ್ಯವಾದ ಸಲ್ಲಿಸಿದರು.
ಮಕ್ಕಳ ಹೆಸರಿನಲ್ಲಿ ಗ್ರೋ ಬ್ಯಾಗ್ಗಳನ್ನು ನೀಡಿ, ಅವುಗಳಲ್ಲಿ ತರಕಾರಿ ಹಾಗೂ ಸೊಪ್ಪುಗಳನ್ನು ಬೆಳೆಸಿ, ಪೌಷ್ಟಿಕ ಆಹಾರದ ಮಹತ್ವವನ್ನು ಮಕ್ಕಳಿಗೆ ಪ್ರಾರಂಭಿಕ ಹಂತದಿಂದಲೇ ತಿಳಿಸುವಂತೆ ಪೋಷಕರು ಹಾಗೂ ದಾನಿಗಳಿಗೆ ಮನವಿ ಮಾಡಿದರು. ಅಲ್ಲದೆ, ಅಂಗನವಾಡಿ ಮಕ್ಕಳಿಗೆ ತಲಾ ಎರಡು ಜೊತೆ ಟ್ರ್ಯಾಕ್ ಪ್ಯಾಂಟ್ಗಳನ್ನು ಸಮವಸ್ತ್ರವಾಗಿ ನೀಡಲು ದಾನಿಗಳು ಸಹಕರಿಸುವಂತೆ ಕೋರಿದರು.
ಮಕ್ಕಳ ತೂಕವನ್ನು ನಿಯಮಿತವಾಗಿ ಪರಿಶೀಲಿಸುವ ಮಹತ್ವವನ್ನು ತಿಳಿಸಿ, ಅಪೌಷ್ಟಿಕತೆ ಮುಕ್ತ ಹಾಗೂ ಆರೋಗ್ಯವಂತ ಮಕ್ಕಳನ್ನು ಬೆಳೆಸಲು ಜಂಕ್ಫುಡ್ನಿಂದ ಮಕ್ಕಳನ್ನು ದೂರವಿಟ್ಟು, ಸಾಂಪ್ರದಾಯಿಕ ಹಾಗೂ ಸ್ಥಳೀಯ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಹಣ್ಣಿನ ಗಿಡ ನೆಡುವ ಮೂಲಕ ಪೋಷಣ್ ಮಾಸಾಚರಣೆಯ ಉದ್ದೇಶದ ಕುರಿತು ಜಾಗೃತಿ ಮೂಡಿಸಲಾಯಿತು. ಅಂಗನವಾಡಿ ಮಕ್ಕಳಿಂದ ಸ್ವಾಗತ ನೃತ್ಯ ನಡೆಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಅಂಗನವಾಡಿ ಕಾರ್ಯಕರ್ತೆ ನೀತು ನೆರವೇರಿಸಿ ಅಂಗನವಾಡಿ ಸಹಾಯಕಿ ದಿವ್ಯ ವಂದಿಸಿದರು.
Back to top button
error: Content is protected !!