ಪ್ರಕಟಣೆ

ಕುಶಾಲನಗರಕ್ಕೆ ತಕ್ಷಣ ಪ್ರತ್ಯೇಕ ತಹಶೀಲ್ದಾರ್ ನೇಮಿಸಿ: ಭಾಸ್ಕರ್ ನಾಯಕ್ ಆಗ್ರಹ

ಕುಶಾಲನಗರ, ಸೆ 23: ಕುಶಾಲನಗರ ಪ್ರತ್ಯೇಕ ತಾಲೂಕಾಗಿ ರಚನೆಯಾದ ಬಳಿಕ ಇಲ್ಲಿ ಪ್ರತ್ಯೇಕ ತಹಶೀಲ್ದಾರ್ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಕಳೆದ ಐದು ತಿಂಗಳಿಂದ ಕುಶಾಲನಗರ ತಾಲೂಕಿಗೆ ಪ್ರತ್ಯೇಕ ತಹಶೀಲ್ದಾರ್ ಇಲ್ಲದೆ, ಸೋಮವಾರಪೇಟೆ ಮತ್ತು ಕುಶಾಲನಗರ ಎರಡು ತಾಲೂಕುಗಳ ಜವಾಬ್ದಾರಿಯನ್ನು ಒಬ್ಬರೇ ತಹಶೀಲ್ದಾರ್ ನಿರ್ವಹಿಸುತ್ತಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಜನಪರ ಹೋರಾಟಗಾರ ಭಾಸ್ಕರ್ ನಾಯಕ್ ತಿಳಿಸಿದ್ದಾರೆ.

ಪ್ರತ್ಯೇಕ ತಹಶೀಲ್ದಾರ್ ಇಲ್ಲದ ಕಾರಣ ಕಂದಾಯ ಇಲಾಖೆಗೆ ಸಂಬಂಧಿಸಿದ ಕಡತಗಳ ವಿಲೇವಾರಿ, ಜಮೀನು ಮತ್ತು ಪಹಣಿ ವಿಚಾರಗಳು, ಜಾತಿ–ಆದಾಯ ಪ್ರಮಾಣಪತ್ರ, ವಿವಿಧ ಸರ್ಕಾರಿ ಪ್ರಮಾಣಪತ್ರಗಳು ಹಾಗೂ ಸಾರ್ವಜನಿಕರ ಅರ್ಜಿಗಳ ಪರಿಶೀಲನೆ ಸೇರಿದಂತೆ ಹಲವು ಕೆಲಸಗಳು ವಿಳಂಬವಾಗುತ್ತಿವೆ. ಅಧಿಕಾರಿಗಳ ಭೇಟಿಗಾಗಿ ಸಾರ್ವಜನಿಕರು ಪದೇಪದೇ ತಾಲೂಕು ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರ ಜೊತೆಗೆ ಎಸ್‌ಐಆರ್ ಪ್ರಕ್ರಿಯೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಂಬಂಧಿಸಿದ ಕೆಲಸಗಳಲ್ಲಿಯೂ ಸಾರ್ವಜನಿಕರಿಗೆ ವಿಳಂಬ ಮತ್ತು ತೊಂದರೆ ಉಂಟಾಗುತ್ತಿದೆ. ಎರಡು ತಾಲೂಕುಗಳ ಆಡಳಿತಾತ್ಮಕ ಜವಾಬ್ದಾರಿಯನ್ನು ಒಬ್ಬರೇ ಅಧಿಕಾರಿಗಳು ನಿರ್ವಹಿಸುತ್ತಿರುವುದರಿಂದ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಆದ್ದರಿಂದ ಸರ್ಕಾರ ಹಾಗೂ ಸಂಬಂಧಿಸಿದ ಮೇಲಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಯಾವುದೇ ವಿಳಂಬ ಮಾಡದೆ ಕುಶಾಲನಗರ ತಾಲೂಕಿಗೆ ತಕ್ಷಣವೇ ಪ್ರತ್ಯೇಕ ತಹಶೀಲ್ದಾರ್‌ರನ್ನು ನೇಮಿಸಬೇಕು. ಇದರಿಂದ ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಕೆಲಸಗಳು ವೇಗವಾಗಿ ನಡೆಯಲು ಹಾಗೂ ಸಾರ್ವಜನಿಕರಿಗೆ ಸಮರ್ಪಕ ಆಡಳಿತ ಸೇವೆ ದೊರೆಯಲು ಅನುಕೂಲವಾಗಲಿದೆ.
ತಹಶೀಲ್ದಾರ್ ನೇಮಕದಲ್ಲಿ ಇನ್ನಷ್ಟು ವಿಳಂಬ ಮಾಡಿದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ. ಅಗತ್ಯವಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಭಾಸ್ಕರ್ ನಾಯಕ್ ಎಚ್ಚರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!