ಧಾರ್ಮಿಕ

ಮಹಿಳೆಯರು ಸರಕಾರ ಮತ್ತು ಸಂಘ ಸಂಸ್ಥೆಗಳ ಯೋಜನೆಗಳ ಸದುಪಯೋಗ ಪಡೆಯಲು ಶಾಸಕ ಡಾ ಮಂತರ್ ಗೌಡ ಕರೆ

ಕುಶಾಲನಗರ, ಸೆ 04: ಮಹಿಳೆಯರು ಸರಕಾರದ ಮತ್ತು ಸಂಘ ಸಂಸ್ಥೆಗಳ ಯೋಜನೆಗಳ ಸದುಪಯೋಗ ಪಡೆಯುವ ಮೂಲಕ ಆರ್ಥಿಕವಾಗಿ ಸಬಲೀಕರಣ ಹೊಂದಬೇಕು ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಕರೆ ನೀಡಿದರು.

ವೇದಿಕೆಯಲ್ಲಿ ಪಾಲ್ಗೊಂಡಿದ್ದ ಗಣ್ಯರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸಾಮೂಹಿಕ ವರ ಮಹಾಲಕ್ಷ್ಮಿ ಪೂಜಾ ಸಮಿತಿ ಹಾಗೂ ಶನೀಶ್ವರ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಗೊಂದಿ ಬಸವನಹಳ್ಳಿ ಗ್ರಾಮದಲ್ಲಿ ನಡೆದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಶಿಕ್ಷಣ ನೀಡುವುದು ಪೋಷಕರ ಆದ್ಯ ಕರ್ತವ್ಯ. ಶಿಕ್ಷಣ ಶಾಶ್ವತ ಆಸ್ತಿಯಾಗಿದ್ದು ಆ ಮೂಲಕ ಜೀವನದ ಗುರಿ ತಲುಪಲು ಸಾಧ್ಯ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಮಾಜದ ತಳಮಟ್ಟದ ಜನರಿಗೆ ಅಗತ್ಯವಿರುವ ಆರ್ಥಿಕ, ಸಾಮಾಜಿಕ ಯೋಜನೆಗಳನ್ನು ತಲುಪಿಸುತ್ತಿರುವ ಬಗ್ಗೆ ಶಾಸಕರು ಹೆಮ್ಮೆ ವ್ಯಕ್ತಪಡಿಸಿದರು.

ಮೆರವಣಿಗೆ ಸಂದರ್ಭ

ಧಾರ್ಮಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಾಜಿ ಸಚಿವ ಎಂ ಪಿ ಅಪ್ಪಚ್ಚು ರಂಜನ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಕಷ್ಟು ಯೋಜನೆಗಳು ಸಮಾಜದ ಬಹುತೇಕ ಜನರಿಗೆ ಸಹಕಾರಿಯಾಗಿದ್ದು ಮಹಿಳೆಯರು ಆರ್ಥಿಕ ಸಬಲೀಕರಣ ಹೊಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು ಯೋಜನೆಯ ಸಾಲ ಪಡೆದುಕೊಂಡು ಅದರ ಮರುಪಾವತಿ ಹಾಗೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ದೇವರ ಹೆಸರು ಕೆಡಿಸುವವರ ಉದ್ಧಾರ ಅಸಾಧ್ಯ ಎಂದ ರಂಜನ್ ಧರ್ಮಸ್ಥಳ ಕ್ಷೇತ್ರದ ಹೆಸರನ್ನು ಕೆಡಿಸಲು ಯತ್ನಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಕ್ಷೇತ್ರ ಧರ್ಮಸ್ಥಳ ಯೋಜನೆಯ ಮೂಲಕ ಮಹಿಳೆಯರ ಬದುಕಿನ ಬಲವರ್ಧನೆ ಸಾಧ್ಯವಾಗಿದೆ ಎಂದ ಅವರು ಸಮಾಜ ನಿಂತ ನೀರಾಗಬಾರದು. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು ಎಂದರು.

ಕ್ಷೇತ್ರ ಯೋಜನೆಯ ಜಿಲ್ಲಾ ನಿರ್ದೇಶಕ ವಿಠ್ಠಲ ಸಾಲಿಯಾನ್ ಅವರು ಮಾತನಾಡಿ, ಪ್ರತಿಯೊಬ್ಬರೂ ಸಂಸ್ಕಾರವಂತರಾಗಬೇಕು. ಪೂಜೆ ಪುರಸ್ಕಾರಗಳ ಮೂಲಕ ಶಾಂತಿ ನೆಮ್ಮದಿ ಗಳಿಸಲು ಸಾಧ್ಯ ಎಂದ ಅವರು ಜಲಮೂಲಗಳ ಸಂರಕ್ಷಣೆ ಪ್ರಕೃತಿಯ ಆರಾಧನೆ ಹಾಗೂ ಸಾಮಾಜಿಕ ಪ್ರಜ್ಞೆ ಮೂಲಕ ಸಮಾಜದಲ್ಲಿ ಪ್ರತಿಯೊಬ್ಬರು ಉತ್ತಮ ಬದುಕು ರೂಪಿಸಿಕೊಳ್ಳುವಂತಾಗಬೇಕು ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ
ಕೊಡ್ಲಿಪೇಟೆ ಕಿರಿ ಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು. ಮಹಿಳೆಯರು ಶಿಕ್ಷಣದ ಆರ್ಥಿಕ ಸಬಲತೆ ಗಳಿಸುವುದರೊಂದಿಗೆ ಮಾನಸಿಕ ಸದೃಢತೆ ಹೊಂದುವಂತಾಗಬೇಕು. ಜೀವನದ ಮೌಲ್ಯಗಳು ಕಡಿಮೆಯಾದಲ್ಲಿ ಎಲ್ಲಾ ರಂಗಗಳಲ್ಲಿ ಪರಿಣಾಮ ಬೀರುತ್ತದೆ. ಪರಸ್ಪರ ಪ್ರೀತಿ ವಿಶ್ವಾಸ ಮೂಲಕ ಬದುಕು ರೂಪಿಸಿಕೊಂಡಲ್ಲಿ ನೆಮ್ಮದಿ ಕಾಣಬಹುದು ಎಂದ ಶ್ರೀಗಳು ಪೂಜೆಗಳು ಶ್ರದ್ದೆಯ ಪೂಜೆ ಆಗಬೇಕೆ ಹೊರತು ಆಡಂಬರದ ಪೂಜೆ ಆಗಬಾರದು ಎಂದರು. ನಾಡಿನ ಒಳಿತಿಗಾಗಿ ಪ್ರತಿಯೊಬ್ಬರು ಸಾಮೂಹಿಕವಾಗಿ ಪ್ರಾರ್ಥಿಸ ಬೇಕಾಗಿದೆ ಎಂದರು.

ವರಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷ ಎಂ ಬಿ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮಾಜಿ ಅಧ್ಯಕ್ಷ ಬಿ.ಜಿ. ಮಂಜುನಾಥ್, ಜನಜಾಗೃತಿ ವೇದಿಕೆ ಕೊಡಗು ಜಿಲ್ಲಾ ಸದಸ್ಯ ಎಂ. ಎನ್. ಚಂದ್ರಮೋಹನ್ ಪುರಸಭಾ ನಾಜಿ ನಾಮ ನಿರ್ದೇಶಿತ ಸದಸ್ಯರುಗಳಾದ ಎಂ.ಎಂ. ಪ್ರಕಾಶ್ ಜಿ.ಬಿ. ಜಗದೀಶ್, ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಗೋವಿಂದಪ್ಪ, ಶನೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಜಿ‌.ಜಿ. ಮಂಜಪ್ಪ ಉಪಾಧ್ಯಕ್ಷರುಗಳಾದ ಮಂಜುಳಾ ದಿವಾಕರ್, ಮಲ್ಲಿಗೆ ತಿಮ್ಮಪ್ಪ, ಕಾರ್ಯದರ್ಶಿ ಪವಿತ್ರಾಕ್ಷಿ ಕೋಶಾಧಿಕಾರಿ ಡಿ.ಎಸ್. ಹರೀಶ್ ಜಂಟಿ ಕಾರ್ಯದರ್ಶಿ ಶ್ರೀನಿವಾಸ್, ಪ್ರಮುಖರಾದ ಎಂ.ಕೆ ದಿನೇಶ್, ಮಧು ಕುಮಾರ್, ಡಿ.ಎಸ್. ಯೋಗೇಶ್, ದಿನೇಶ್ ಕುಮಾರ್, ಪಾರ್ವತಿ, ರಾಧಾ, ಮತ್ತಿತರರು ಇದ್ದರು.
ಕ್ಷೇತ್ರ ಯೋಜನೆಯ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶನೇಶ್ವರ ಸ್ವಾಮಿ ದೇವಾಲಯ
ಅರ್ಚಕ ಕೆ ಗೌಡಯ್ಯ ಮತ್ತು ರಾಮ ನಾಯಕ ದಂಪತಿಗಳನ್ನು ಮತ್ತು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗುಡ್ಡೆ ಹೊಸೂರು ವಲಯ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ವರಲಕ್ಷ್ಮಿ ಪೂಜಾ ಸಮಿತಿ ಗುಡ್ಡೆ ಹೊಸೂರು ವಲಯ ಮತ್ತು ಯೋಜನೆಯ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಕಾರ್ಯಕರ್ತರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ಶ್ರೀ ಸದಾಶಿವ ಸ್ವಾಮೀಜಿ ಮತ್ತು ಮಾಜಿ ಸಚಿವರಾದ ಎಂ ಪಿ ಅಪ್ಪಚ್ಚು ರಂಜನ್ ಮತ್ತಿತರರು ಗೊಂದಿ ಬಸವನಹಳ್ಳಿ ಮಾರಮ್ಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಶನೇಶ್ವರ ದೇವಾಲಯಕ್ಕೆ ತೆರಳಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!