ಪ್ರಕಟಣೆ

ಕೊಡಗಿನಲ್ಲಿ ಮೋಡ ಬಿತ್ತನೆ ಮಾಡುವ ಮೊದಲು ಸರ್ಕಾರ ಎಚ್ಚರಿಕೆ ವಹಿಸಲಿ: ವೈಜ್ಞಾನಿಕ ಅಧ್ಯಯನವಿಲ್ಲದೆ ಪ್ರಯೋಗ ಬೇಡ- ಭಾಸ್ಕರ್ ನಾಯಕ್

ಕುಶಾಲನಗರ, ಆ 24:ರಾಜ್ಯ ಸರ್ಕಾರವು ಮಳೆ ಕೊರತೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ಮೋಡ ಬಿತ್ತನೆ ಕಾರ್ಯಕ್ರಮ ಕೈಗೊಳ್ಳಲು ಮುಂದಾಗಿರುವ ಹಿನ್ನೆಲೆಯಲ್ಲಿ, ಕೊಡಗು ಜಿಲ್ಲೆಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸುವ ಮೊದಲು ಸರ್ಕಾರ ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಬಿಜೆಪಿ ಮುಖಂಡ ಹಾಗೂ ಜನಪರ ಹೋರಾಟಗಾರರಾದ ಭಾಸ್ಕರ್ ನಾಯಕ್ ರವರು ಒತ್ತಾಯಿಸಿದರು . ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು,  ರಾಜ್ಯದ ಇತರೆ ಒಣ ಪ್ರದೇಶಗಳಿಗೆ ಅನ್ವಯಿಸುವ ಕ್ರಮವನ್ನು ಕೊಡಗಿನಂತಹ ಅತಿಸೂಕ್ಷ್ಮ ಪಶ್ಚಿಮಘಟ್ಟ ಪ್ರದೇಶಕ್ಕೂ ಅದೇ ರೀತಿಯಲ್ಲಿ ಅನ್ವಯಿಸುವುದು ಸೂಕ್ತವಲ್ಲ.

ಕೊಡಗಿನಲ್ಲಿ ಅತಿಯಾದ ಮಳೆಯ ಪರಿಣಾಮವಾಗಿ ಈ ಹಿಂದೆ ಭೂಕುಸಿತ, ಪ್ರವಾಹ, ರಸ್ತೆ ಹಾಗೂ ಕೃಷಿ ಪ್ರದೇಶಗಳಿಗೆ ಹಾನಿ ಸಂಭವಿಸಿರುವುದು ನಮ್ಮೆಲ್ಲರಿಗೂ ತಿಳಿದಿರುವ ಸಂಗತಿ. ಅಧಿಕ ಮಳೆಯಿಂದ ಕಾಫಿ ಮತ್ತು ಇತರೆ ತೋಟಗಳಿಗೂ ಗಂಭೀರ ಹಾನಿಯಾಗಿರುವ ದಾಖಲೆಗಳಿವೆ.
ಮೋಡ ಬಿತ್ತನೆಯ ಮೂಲಕ ಮಳೆಯ ಪ್ರಮಾಣ, ಮಳೆಯ ತೀವ್ರತೆ ಮತ್ತು ಮಳೆಯಾಗುವ ಸ್ಥಳವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿಲ್ಲ. ಆದ್ದರಿಂದ ಈಗಾಗಲೇ ಭೂಕುಸಿತಕ್ಕೆ ಸೂಕ್ಷ್ಮವಾಗಿರುವ ಕೊಡಗಿನ ಗುಡ್ಡ ಪ್ರದೇಶಗಳಲ್ಲಿ ಹೆಚ್ಚುವರಿ ಮಳೆಯ ಪರಿಸ್ಥಿತಿ ಉಂಟಾದರೆ ಅದರ ಪರಿಣಾಮಗಳ ಕುರಿತು ಸರ್ಕಾರ ಮುಂಚಿತವಾಗಿ ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು.
ಕೊಡಗಿನ ಪರಿಸರಕ್ಕೆ ಅಪಾಯ ಉಂಟುಮಾಡಬಹುದಾದ ಯಾವುದೇ ಯೋಜನೆಯನ್ನು ಸ್ಥಳೀಯ ಜನರ ಅಭಿಪ್ರಾಯವಿಲ್ಲದೆ ಜಾರಿಗೊಳಿಸಬಾರದು. ಕೊಡಗಿಗೆ ಮಳೆ ಬೇಕು; ಆದರೆ ಕೊಡಗಿನ ಭೌಗೋಳಿಕ ಪರಿಸ್ಥಿತಿಯನ್ನು ಪರಿಗಣಿಸದೆ ಕೃತಕವಾಗಿ ಮಳೆಯ ಪ್ರಮಾಣ ಹೆಚ್ಚಿಸುವ ಪ್ರಯತ್ನ ಬೇಡ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!