ಸುದ್ದಿಗೋಷ್ಠಿ

ದೆಹಲಿಯಲ್ಲಿ ವಿದ್ಯಾರ್ಥಿಗಳ‌ ಮೇಲಿನ ದಾಳಿಗೆ ಖಂಡನೆ: ಶಿಕ್ಷಣ ಸಚಿವ, ಪ್ರಧಾನಿ ರಾಜೀನಾಮೆಗೆ ಆಗ್ರಹ

ಕುಶಾಲನಗರ, ಜು 22: ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಹಾಗೂ ಅಶ್ರುವಾಯು ದಾಳಿಯನ್ನು ಸಿ.ಪಿ.ಐ.ಎಂ.ಎಲ್. ರೆಡ್ ಸ್ಟಾರ್ ಪಕ್ಷದ ಕೊಡಗು ಜಿಲ್ಲಾ ಸಮಿತಿ ಖಂಡಿಸಿದೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಸ್.ಆರ್.ಮಂಜುನಾಥ್, ತಮ್ಮ ಹಕ್ಕಿಗಾಗಿ, ಮುಂದಿನ ಬದುಕನ್ನು ರೂಪಿಸಿಕೊಳ್ಳಲು ಹೋರಾಟ ನಡೆಸಿದ ವಿದ್ಯಾರ್ಥಿ, ಯುವಜನರು, ಹೋರಾಟಗಾರರ ಮೇಲೆ ಮನಸೋಇಚ್ಛೆ ಲಾಠಿಚಾರ್ಜ್ ಮಾಡಿ ಅಶ್ರುವಾಯು ಪ್ರಯೋಗ ಮಾಡಿರುವ ಘಟನೆ ಪ್ರಜಾಪ್ರಭುತ್ವಕ್ಕೆ ಮಾಡಿದ ಅನ್ಯಾಯವಾಗಿದೆ. ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಕೂಡ ಬದುಕು ಕಟ್ಟಿಕೊಂಡಿದ್ದೇವೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ಅಡಿಯಲ್ಲಿ ಈ ದೇಶ ಮುನ್ನಡೆಯುತ್ತಿದೆ‌. ವಿದ್ಯಾರ್ಥಿಗಳ ಮೇಲೆ ‌ನಡೆಸಿದ ಅಮಾನವೀಯ ಕೃತ್ಯ ಸರ್ವಾಧಿಕಾರ ಆಡಳಿತದ ಧ್ಯೋತಕವಾಗಿದೆ ಎಂದು ಆರೋಪಿಸಿದರು. ಇವತ್ತಿನ ಯುವಕರು ಮುಂದಿನ ಪ್ರಜೆಗಳು. ಅವರು ಭವಿಷ್ಯದಲ್ಲಿ ಉನ್ನತ ಸ್ಥಾನ ಅಲಂಕರಿಸಬೇಕಾದವರು. ಅಂತಹವರ ವಿರುದ್ದ ಅಮಾನವೀಯ ದಾಳಿ ಸಹಿಸಲಸಾಧ್ಯ. ಉನ್ನತ ಶಿಕ್ಷಣ ಪಡೆದ ಲಕ್ಷಾಂತರ ಮಂದಿ ಉದ್ಯೋಗವಿಲ್ಲದೆ ಪರದಾಡುವ ಸ್ಥಿತಿ ದೇಶದಲ್ಲಿ ನಿರ್ಮಾಣಗೊಂಡಿದೆ. ಕೇಂದ್ರದ ಕೋಮುವಾದಿ ಸರಕಾರ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಿದೆ. ಕೂಡಲೆ ಕೇಂದ್ರದ ಶಿಕ್ಷಣ ಸಚಿವರು ಹಾಗೂ ಪ್ರಧಾನಿ ರಾಜೀನಾಮೆ ನೀಡಬೇಕಿದೆ ಎಂದು ಒತ್ತಾಯಿಸಿದರು.

ಪಕ್ಷದ ರಾಜ್ಯ ಸಮಿತಿ ಸದಸ್ಯ ಹೆಚ್.ಸಿ.ಸಣ್ಣಪ್ಪ ಮಾತನಾಡಿ,
​ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆ ದೇಶದ ಆರ್ಥಿಕ ವ್ಯವಸ್ಥೆಗೆ ಒಂದು ಬುನಾದಿಯಾಗಿದೆ. ಸಿಂಗಾಪೂರ್ ನಲ್ಲಿ ಶಿಕ್ಷಣಕ್ಕೆ ಮೊದಲ ಆದ್ಯತೆಯನ್ನು ಕೊಟ್ಟಿದ್ದಾರೆ. ಅಲ್ಲಿ ಉಚಿತ ಶಿಕ್ಷಣವನ್ನು ದೊರೆಯುತ್ತಿದೆ. ಯಾವ ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ಉಚಿತವಾಗಿರುತ್ತದೋ, ಆ ದೇಶ ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದೆ ಎಂದು ಅರ್ಥ. ದೇಶವನ್ನು ಅಭಿವೃದ್ಧಿ ಮಾಡಬೇಕಾದರೆ, ಕೈಗಾರಿಕೆಗೆ ಹೆಚ್ಚು ಒತ್ತು ಕೊಡಬೇಕು. ನಮ್ಮ ದೇಶದ ಪ್ರಧಾನಿ ಅನೇಕ ದೇಶಗಳನ್ನು ಸುತ್ತಿದ್ದಾರೆ, ಆದರೆ ಎಲ್ಲೂ ಕೂಡ ವಿದೇಶದಲ್ಲಿದ್ದಾಗ ಕೈಗಾರಿಕೋದ್ಯಮಿಗಳ ಜೊತೆ ಚರ್ಚೆ ಮಾಡಿರುವ ಉದಾಹರಣೆಗಳು ಬಹಳ ಕಡಿಮೆ. ಹಾಗೂ ವಿದೇಶ ಪ್ರವಾಸದಿಂದ ಭಾರತದಲ್ಲಿ ಬಂಡವಾಳ ಹೂಡಿಕೆ ಏರಿಕೆಯಾಗಿಲ್ಲ. ವಿದ್ಯಾರ್ಥಿಗಳ ಬಹುಮುಖ್ಯ ಬೇಡಿಕೆಯಾದ ನೀಟ್ ಅವ್ಯವಹಾರಕ್ಕೆ ಸಂಬಂಧಪಟ್ಟವರನ್ನು ವಿಚಾರಣೆ ನಡೆಸಬೇಕು ಮತ್ತು ಸಂಬಂಧಪಟ್ಟ ಸಚಿವ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
​ಗೋಷ್ಠಿಯಲ್ಲಿ ಸಿ.ಪಿ.ಐ.ಎಂ.ಎಲ್ ರೆಡ್ ಸ್ಟಾರ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಚಂದನ್, ಹೆಚ್.ಡಿ.ಸೋಮಶೇಖರ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!