ಕುಶಾಲನಗರ, ಜೂ 20: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ,ಯೂರಿಯಾ ರಸಗೊಬ್ಬರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಬಾವುಟ,ಬ್ಯಾನರ್ ಹಿಡಿದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕಾಂಗ್ರೆಸ್ ಕಚೇರಿ ಬಳಿಯಿಂದ ಜೀಪ್ ಗೆ ಹಗ್ಗ ಕಟ್ಟಿ ಕಾರ್ಯಕರ್ತರು ಎಳೆದು ತರುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಕಚೇರಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ಮೆರವಣಿಗೆ ಉದ್ದಕ್ಕೂ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ,ಅಮಿತ್ ಷಾ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತರು, ವಿದ್ಯಾರ್ಥಿ, ಮಹಿಳಾ ವಿರೋಧಿ ಕೇಂದ್ರ ಬಿಜೆಪಿ ಸರ್ಕಾರವನ್ನು ತೊಲಗಿಸಬೇಕು ಎಂದು ಘೋಷಣೆ ಕೂಗಿದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಿ ಅರ್ಧತಾಸಿಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.
ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಮಧ್ಯಪ್ರಾಚ್ಯದಲ್ಲಿ ಯುದ್ದಕ್ಕೆ
ವಿರಾಮ ನೀಡಿದ ಬಳಿಕ ಅಂತರಾಷ್ಟ್ರೀಯಮಟ್ಟದಲ್ಲಿ ಕಚ್ಚಾತೈಲದ ಬೆಲೆ ಗಣನೀಯವಾಗಿ ಇಳಿಕೆ ಆಗಿದೆ.
ಆದರೆ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಯುದ್ಧದ ನೆಪವೊಡ್ಡಿ ಪೆಟ್ರೋಲ್ ಡೀಸಲ್ ಅನಿಲ ಅಡುಗೆ ಬೆಲೆ ಏರಿಕೆ ಮಾಡುವ ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ.ರೈತ ಕೃಷಿ ಚಟುವಟಿಕೆಗೆ ಅಗತ್ಯವಾಗಿರುವ ಯೂರಿಯಾ ರಸಗೊಬ್ಬರ ದುಡ್ಡು ಕೊಟ್ಟರು ಸಿಗುತ್ತಿಲ್ಲ.ಸಿಇಟಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಹನ್ನೆರಡು ವರ್ಷಗಳ ಮೋದಿ ಆಡಳಿತ ವ್ಯವಸ್ಥೆ ಸಂಪೂರ್ಣ ಹಳ್ಳಿತಪ್ಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರದ ಆಡಳಿತ ವೈಫಲ್ಯದಿಂದ ದೇಶ ಅದೋಗತಿಗೆ ಬಂದು ನಿಂತಿದ್ದು,ಮೋದಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಕೆಪಿಸಿಸಿ ವಕ್ತಾರ ಟಿ.ಎಂ.ಶಾಹಿದ್ ತೆಕ್ಕಿಲ್ ಮಾತನಾಡಿ,ಕಾಂಗ್ರೆಸ್ ಪಕ್ಷ ದೇಶ ಕಟ್ಟಿದರೆ ಪ್ರಧಾನಿ ನರೇಂದ್ರ ಮೋದಿ ಅವರು ಅಂಬಾನಿ, ಅದಾನಿ ಅವರಿಗೆ ದೇಶವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ರೈಲ್ವೆ, ವಿಮಾನ, ಬಿಎಸ್.ಎನ್.ಎಲ್ ಸೇರಿದಂತೆ ಅನೇಕ ಕ್ಷೇತ್ರಗಳನ್ನು ಖಾಗೀಕರಣಗೊಳಿಸಲು ಹುನ್ನಾರ ನಡೆಯುತ್ತಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಎಚ್.ಕೆ.ನಟೇಶ್ ಗೌಡ, ಚಂದ್ರಶೇಖರ್, ಎಸ್.ಎಸ್.ಚಂದ್ರಶೇಖರ್, ಕೆ.ಎಸ್.ಕೃಷ್ಣೇಗೌಡ, ಟಿ.ಕೆ.ಪಾಂಡುರಂಗ,ವಿ.ಎಸ್.ಆನಂದ್ ಕುಮಾರ್,ಶಶಿಭೀಮಯ್ಯ,ಮಲ್ಲಿಕಾರ್ಜುನ, ಅಜೀಜ್ , ಗೋವಿಂದಪ್ಪ,ಸುಂಟಿಕೊಪ್ಪ ಕರೀಂ, ರಫೀಕ್, ಹೊಸಕೋಟೆ ರಮೇಶ್ ,ಕುನ್ನಿಕುಟ್ಟಿ, ಶ್ರೀನಿವಾಸ್, ರಮೇಶ್,ಎಚ್.ಡಿ.ಚಂದ್ರು,
ಸುನೀತಾ ಮಂಜುನಾಥ್, ಜೆ.ಫಿಲೋಮಿನಾ, ಸವಿತಾ,ನಿಂಗಜಮ್ಮ,ಗೀತಾಬಸಪ್ಪ, ಮುಳುಸೋಗೆ ರಮೇಶ್, ಹಕ್ಕೆಮೋಹನ್, ಶೇಷಪ್ಪ, ಆನಂದ್, ಕೆ.ಕೆ.ಮಂಜುನಾಥ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
20 ಕೆಯುಎಸ್ 07 ಚಿತ್ರದಲ್ಲಿ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ,ಯೂರಿಯಾ ರಸಗೊಬ್ಬರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
Back to top button
error: Content is protected !!