ಕುಶಾಲನಗರ, ಮೇ 19: ದುಬಾರೆಯಲ್ಲಿ ನದಿಯಲ್ಲಿ ಮಲಗಿದ್ದ ಸ್ಥಿತಿಯಲ್ಲಿದ್ದ ವಯಸ್ಸಾದ ಜಯ ಮಾರ್ತಾಂಡನ ಮೇಲೆ ಬಿಸಿ ರಕ್ತದ ಕಂಜನ್ ದಾಳಿ ನಡೆಸಿದ ಪರಿಣಾಮ ಜಯಮಾರ್ತಾಂಡ ಅಸುನೀಗಿದ್ದಾನೆ.
ಪಾಪ ಪ್ರವಾಸಿಗರನ್ನು ರಂಜಿಸುವ ಕಾರ್ಯದಲ್ಲಿ ಮಗ್ನನಾಗಿದ್ದ 53 ವರ್ಷದ ಜಯಮಾರ್ತಾಂಡ 26 ವರ್ಷದ ಕಂಜನ್ ದಾಳಿಯನ್ನು ನಿರೀಕ್ಷಿಸಿರಲಿಲ್ಲ. ಏಕಾಏಕಿ ದಂತದಿಂದ ದಾಳಿ ನಡೆಸಿದ ಕಂಜನ್ ನಿಂದ ತಪ್ಪಿಸಿಕೊಳ್ಳಲು ಮಾರ್ತಾಂಡನಿಗೆ ಸಾಧ್ಯವಾಗಲಿಲ್ಲ.
ಮೊದಲೇ ಮಕ್ನಾ ಆನೆಯಾದ ಮಾರ್ತಾಂಡನಿಗೆ ದಂತಗಳಿಲ್ಲ. ಆದರೂ ಆತ ಬಲಶಾಲಿ. ಬೆನ್ನ ಹಿಂದಿನಿಂದ ಚೂರಿ ಇರಿಯುವ ಮಾದರಿಯಲ್ಲಿ ಕಂಜನ್ ದಾಳಿ ನಡೆಸಿದ ಪರಿಣಾಮ ಹೊಟ್ಟೆ ಕರಳು ಘಾಸಿಗೊಂಡು ಮಾರ್ತಾಂಡ ಮೃತಪಟ್ಟಿದ್ದಾನೆ. ಹೊಂಚು ಹಾಕಿ ಕಾದು ಕಂಜನ್ ದಾಳಿ ನಡೆಸಿದಂತಿದೆ. ಮಾರ್ತಾಂಡ ನ ಕಿವಿ, ತೊಡೆ, ಹೊಟ್ಟೆಗೆ ದಂತದಿಂದ ತಿವಿದು ಜೀವ ತೆಗೆದಿದ್ದಾನೆ.
ಒಂದು ವೇಳೆ ನದಿಯಿಂದ ಮೇಲೇಳಲು ಮಾರ್ತಾಂಡ ನಿಗೆ ಅವಕಾಶ ಸಿಕ್ಕಿ, ಕಂಜನ್ ಗೆ ಮುಖಾಮುಖಿ ನಿಲ್ಲಲು ಸಾಧ್ಯವಾಗಿದ್ದಲ್ಲಿ ಮಾರ್ತಾಂಡ ಜೀವ ಕಳೆದುಕೊಳ್ಳುವ ಸಾಧ್ಯತೆ ಕಡಿಮೆ. ಪ್ರವಾಸಿಗರನ್ನು ಉಳಿಸುವ ಇಂಗಿತವೋ, ಚೈತನ್ಯದ ಕೊರತೆಯೋ ಮಾರ್ತಾಂಡನಿಗೆ ಕಂಜನ್ ದಾಳಿ ಪ್ರತಿಭಟಿಸಲು ಅವಕಾಶ ದೊರೆಯದೆ ಅನ್ಯಾಯವಾಗಿ ಜೀವ ಕಳೆದುಕೊಂಡಿರುವುದು ಆತನ ಸಂಗಡ ನದಿಯಲ್ಲಿ ಕಳೆದ ಪ್ರವಾಸಿಗರಲ್ಲಿ ಸಂಕಟ ಉಂಟುಮಾಡಿದೆ. ಇದೇ ಕಂಜನ್ ಮೈಸೂರಿನ ದಸರಾ ಸಂದರ್ಭ ಧನಂಜಯ ಆನೆಯ ದಾಳಿಗೆ ಹೆದರಿ ಪಲಾಯನಗೈದ ಬಗೆ ಎಲ್ಲರಿಗೂ ಪರಿಚಿತ. ಆದರೆ ಇಲ್ಲಿ ಅಸಹಾಯಕತೆ ಸ್ಥಿತಿಯಲ್ಲಿದ್ದ ಮಾರ್ತಾಂಡನ ಮೇಲೆ ದಾಳಿ ನಡೆಸಿ ಜೀವ ತೆಗೆದಿರುವುದು ಮಾತ್ರ ಕ್ಷಮಿಸಲಸಾಧ್ಯ ಸಂಗತಿ.
Back to top button
error: Content is protected !!