ಕುಶಾಲನಗರ, ಫೆ. 10: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರ ಗ್ರಾಮದಲ್ಲಿರುವ ಶ್ರೀ ಅಳುವಾರದಮ್ಮ ದೇವಾಲಯದ ಸಭಾಂಗಣದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ರವರ ಸಮ್ಮುಖದಲ್ಲಿ ಗ್ರಾಮ ಅರಣ್ಯ ಸಮಿತಿ ಸಭೆಯು ನೆರವೇರಿತು.
ಮೊದಲಿಗೆ ಸಭೆಯಲ್ಲಿ ಶಾಸಕ ಡಾ. ಮಂತರ್ ಗೌಡ ರವರು ಚಿಕ್ಕ ಅಳುವಾರ ಗ್ರಾಮದಲ್ಲಿರುವ ಊರುಡುವೆ ಪೈಸಾರಿ ಸರ್ವೆ ನಂಬರ್ 1/1 ರಲ್ಲಿ 75 ಕೃಷಿ ರೈತ ಕುಟುಂಬದವರು ಬೇಸಾಯ ಮಾಡಿಕೊಂಡು ತಮ್ಮ ಜೀವನವನ್ನು ಸಾಗಿಸುತ್ತಿರುವ ಸಮಗ್ರವಾದ ಮಾಹಿತಿಯನ್ನು ಸ್ಥಳೀಯ ಗ್ರಾಮಸ್ಥರಿಂದ ಮತ್ತು ಸಂಬಂಧಿಸಿದ ಅಧಿಕಾರಿ ವರ್ಗದವರಿಂದ ಮಾಹಿತಿಯನ್ನು ಪಡೆದುಕೊಂಡರು.
ಈಗಾಗಲೇ 100 ವರ್ಷಗಳ ಹಿಂದಿನಿಂದಲೂ ಈ ಜಾಗದಲ್ಲಿ ವಾಸಿಸುತ್ತಿರುವ 75 ಕುಟುಂಬದ ಕೃಷಿ ರೈತರಿಗೆ ಅರಣ್ಯ ಹಕ್ಕು ಸಮಿತಿ ವತಿಯಿಂದ ಜಮೀನಿನ ಹಕ್ಕು ಪತ್ರಗಳನ್ನು ನೀಡಿದಿರುವ ಬಗ್ಗೆ ಮತ್ತು ಸಮಿತಿಯ ವತಿಯಿಂದ ಸಮಗ್ರವಾದ ವರದಿ ಜಿಲ್ಲಾ ಮಟ್ಟದ ಉಪ ವಿಭಾಗಾಧಿಕಾರಿಗೆ ನೀಡಿದರೂ ಹಕ್ಕು ಪತ್ರ ನೀಡುವ ಆದೇಶ ರದ್ದುಗೊಳುತ್ತಿರುವ ಬಗ್ಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳಿಂದ ಗ್ರಾಮ ಆಡಳಿತ ಸಮಿತಿ ಸಂಪೂರ್ಣ ಮಾಹಿತಿಯನ್ನು ಪಡೆದು ಕೊಂಡು ಮುಂದಿನ ದಿನಗಳಲ್ಲಿ ಇಲಾಖೆಯ ಮಾನದಂಡಗಳನ್ನು ಸ್ವಲ್ಪ ಮಟ್ಟಿಗೆ ಸಡಿಲಿಕೆಯ ಮೂಲಕ ಕೃಷಿ ರೈತರಿಗೆ ಹಕ್ಕು ಪತ್ರಗಳನ್ನು ನೀಡಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಸೋಮಶೇಖರ್ ಮಾತನಾಡಿ, ಈಗಾಗಲೇ ಚಿಕ್ಕ ಅಳುವಾರ ಗ್ರಾಮದ ವಿಷಯಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಶಾಸಕ ಸೂಚನೆಯಂತೆ ಸಮಾಲೋಚನೆ ಸಭೆಯ ಮುಖೇನ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ ನಿಯಮಾನುಸಾರ ರೈತರಿಗೆ ಅನುಕೂಲ ಕಲ್ಪಿಸುವ ವ್ಯವಸ್ಥೆ ಮುಂದಾಗುತ್ತೇವೆ ಎಂದು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಕುಶಾಲನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ ಶಶಿಧರ್ ಮಾತನಾಡಿ ರೈತರು ಕಳೆದ ಅನೇಕ ವರ್ಷಗಳಿಂದಲೂ ಅನುಭವಿಸುತ್ತಿರುವ ಹಕ್ಕು ಪತ್ರದ ಸಮಸ್ಯೆಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಸಭೆಗೆ ಒದಗಿಸಿದರು.
ಈ ಸಂದರ್ಭದಲ್ಲಿ ಕುಶಾಲನಗರ ತಾಲ್ಲೂಕು ತಹಸೀಲ್ದಾರ್ ಕಿರಣ್ ಜಿ. ಗೌರಯ್ಯ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಹೊನ್ನೇಗೌಡ, ಸೋಮವಾರಪೇಟೆ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಸಿದ್ದೇಗೌಡ, ತಾಲ್ಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರ್ ಕುಮಾರ್, ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಶೈಲೇಂದ್ರ ಕುಮಾರ್, ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಪ್ರಕಾಶ್, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ನಂಜುಂಡಪ್ಪ, ಅಭಿವೃದ್ಧಿ ಅಧಿಕಾರಿ ಶ್ಯಾಮ್, ಸೇರಿದಂತೆ ಗ್ರಾಮ ಪ್ರಮುಖರಾದ ಕೆ.ಎಸ್. ಕೃಷ್ಣೇ ಗೌಡ, ಟಿ.ಕೆ.ಪಾಂಡುರಂಗ, ಪ್ರೇಮ ಕುಮಾರ್, ರಮೇಶ್, ಮೂರ್ತಿ, ಸೇರಿದಂತೆ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ, ಸದಸ್ಯರು ಸೇರಿದಂತೆ ನೂರಾರು ರೈತರು, ಮತ್ತು ಗ್ರಾಮ ಅರಣ್ಯ ಸಮಿತಿ ಸದಸ್ಯರು, ವಿವಿಧ ಇಲಾಖೆಯ ಹೋಬಳಿ ಮಟ್ಟದ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
Back to top button
error: Content is protected !!