ಧಾರ್ಮಿಕ

ಮಾಘ ಹುಣ್ಣಿಮೆ ಅಂಗವಾಗಿ ಕಾವೇರಿ ಮಾತೆಗೆ ಆರತಿ ಕಾರ್ಯಕ್ರಮ

ಕುಶಾಲನಗರ, ಫೆ 02: ಕುಶಾಲನಗರ-ಕೊಪ್ಪ ಗಡಿಭಾಗದ ಕಾವೇರಿ ದೇಗುಲದಲ್ಲಿ ಬಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ಮಾಘ ಹುಣ್ಣಿಮೆ ಅಂಗವಾಗಿ ಪೂಜಾ ಕಾರ್ಯಕ್ರಮವು ಜರುಗಿತು.
ಕಾವೇರಿ ಪ್ರತಿಮೆಗೆ ಹಾಲು, ತುಪ್ಪ, ಜೇನು, ಎಳನೀರು,ಅರಿಸಿನ, ಕುಂಕುಮಗಳಿಂದ ಅಭಿಷೇಕ ಮಾಡಲಾಯಿತು.
ಅರ್ಚಕ ಪುರುಷೋತ್ತಮ್ ಭಟ್ ನೇತೃತ್ವದಲ್ಲಿ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಲಾಯಿತು.
ಕೌಶಿಕ್ ಸುನಂದಾ ಕುಟುಂಬಸ್ಥರು ಕಾವೇರಿ ಮಾತೆಗೆ ವಸ್ತ್ರ ವಿತರಿಸಿದರು.
ಈ ವೇಳೆ ಬೆಂಗಳೂರಿನ ಜೈ ಹಿಂದ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ವ್ಯವಸ್ಥಾಪಕ ಜಯಪ್ರಕಾಶ್ ಮಾತನಾಡಿ, ನಾಡಿನ ಜೀವನಾಡಿಯಾಗಿರುವ ಕಾವೇರಿ ನದಿ ಕೋಟ್ಯಾಂತರ ಜನರಿಗೆ ನೀರುಣಿಸುವ, ಕೃಷಿ, ನೀರಾವರಿಗೆ ಒದಗುವ ಮಹಾತಾಯಿ. ಹಾಗಾಗಿಯೇ ಜನಮಾನಸದಲ್ಲಿ ಆಕೆಗೆ ಪೂಜನೀಯ ಸ್ಥಾನವಿದೆ.
ಇತ್ತೀಚೆಗೆ ತ್ಯಾಜ್ಯವನ್ನೂ ಪರಿಷ್ಕರಿಸದೆ ನೇರವಾಗಿ ನದಿಗೆ ಹರಿಯಬಿಟ್ಟು ಆಕೆಯ ಒಡಲನ್ನು ಮಲಿನಗೊಳಿಸಲಾಗುತ್ತಿದೆ.
ಕಾವೇರಿ ನದಿಯ ಮಹತ್ವವನ್ನು ಸಂಭ್ರಮಿಸುತ್ತಲೇ ಖುಷಿಪಟ್ಟ ಪೀಳಿಗೆ ನಮ್ಮದು. ಹೀಗಿರುವಾಗ, ಅದರ ಪಾವಿತ್ರ್ಯವನ್ನು ಉಳಿಸಿಕೊಳ್ಳಬೇಕಾದ ಆದ್ಯ ಕರ್ತವ್ಯ ನಮ್ಮದು. ಹಿಂದಿನ ಕಾಲಘಟ್ಟದಲ್ಲಿ ಕಾವೇರಿ ನದಿಯ ಪಾವಿತ್ರ್ಯ ಚೆನ್ನಾಗಿತ್ತು. ಆದರೆ ಇಂದಿನ ಸ್ಥಿತಿ ಅಯೋಮಯವಾಗಿದೆ ಎಂದು ಜಯಪ್ರಕಾಶ್ ಬೇಸರ ವ್ಯಕ್ತಪಡಿಸಿದರು.
ಉದ್ಯಮಿ ನಿರ್ಮಲ ಕಾರ್ಯಪ್ಪ ಮಾತನಾಡಿ, ಕಾವೇರಿ, ನಾಡಿಗೆ ಮಾತೃಸ್ವರೂಪಿಣಿ. ಕೋಟ್ಯಾಂತರ ಜನರ ಜೀವನಾಡಿಯಾಗಿ ಹರಿಯುವ ಜೀವನದಿ. ಈ ನಾಡಿನ ಪರಂಪರೆ, ಸಂಸ್ಕೃತಿ, ಇತಿಹಾಸಕ್ಕೆ ಸಾಕ್ಷಿಯಾಗಿ ಹರಿಯುತ್ತಿರುವ ಜೀವಹನಿ. ಕಾವೇರಿ ನದಿ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ಎಲ್ಲರೂ ಕೈಜೋಡಿಸಬೇಕಿದೆ. ಕಾವೇರಿ ನದಿ ಇಡೀ ನಾಡಿಗೆ ಜೀವನದಿ ಆಗಿದೆ. ಆದ್ದರಿಂದ ಕಾವೇರಿ ನದಿಯ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.
ನಂತರ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಬಾರವಿ ಕನ್ನಡ ಸಂಘದ ಪ್ರಮುಖರಾದ ಬಬೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ರಾಜ ರಾಜೇಶ್ವರಿ ಚಂದ್ರು, ಸೋಮಶೇಖರ್, ಚಂದ್ರು, ತಿಲಕ್ ಪೂಜಾರಿ, ರುದ್ರ, ಉದ್ಯಮಿಗಳಾದ ಸರಸ್ವತಿ ಕಾರ್ಯಪ್ಪ, ವೆಂಕಪ್ಪ ಹೊದ್ದೆಟ್ಟೀರಾ ಸೇರಿದಂತೆ ಮತ್ತಿತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!