ಕುಶಾಲನಗರ, ಜ 26: ಸಿಐಟಿಯು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಿನ್ನಲೆ ಪೂರ್ವಭಾವಿ ಸಭೆ ಕೂಡ್ಲೂರಿನಲ್ಲಿ ನಡೆಯಿತು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಭರತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕ ನೀತಿ, ನಿಯಮಗಳು ಯಾವುದೇ ಸರಕಾರ ಪುಕ್ಕಟೆಯಾಗಿ ನೀಡಿರುವಂತಹದಲ್ಲ. ಅವು ದುಡಿಯುವ ವರ್ಗದ ಸಂವಿಧಾನ ಬದ್ದ ಹಕ್ಕುಗಳು. ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕಿರುವುದು ಸರಕಾರದ ಆದ್ಯ ಕರ್ತವ್ಯ. ಅದನ್ನು ಮರೆತ ಸರಕಾರದ ವಿರುದ್ದ ಸಮರ ಸಾರುವ ಮೂಲಕ ನಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ಪರಿಸ್ಥಿತಿ ಬಂದೊದಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಕಾರ್ಮಿಕ ಕಾನೂನುಗಳ ಮೇಲೆ ಕೇಂದ್ರ ಸರಕಾರ ಗದಪ್ರಹಾರ ನಡೆಸುವ ಮೂಲಕ ಸಡಿಲಗೊಳಿಸುವ ಪ್ರಯತ್ನ ನಡೆಯುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕಾನೂನುಗಳ ವಿಭಜನೆಯಿಂದ ಕಾರ್ಮಿಕರಿಗೆ ಅನಾನುಕೂಲ ಉಂಟುಮಾಡಿ ಸಂಕಷ್ಟ ತಂದೊಡ್ಡಿ, ಬಂಡವಾಳಶಾಹಿಗಳಿಗೆ ಅನುಕೂಲ ಒದಗಿಸುವ ಷಡ್ಯಂತ್ರ ಎಂದು ಅವರು ಆರೋಪಿಸಿದರು. ಮಡಿಕೇರಿಯಲ್ಲಿ ಫೆ.12 ರಂದು ನಡೆಯುವ ಹೋರಾಟದಲ್ಲಿ ಕಾಫಿ ವರ್ಕ್ಸ್ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಿದೆ ಎಂದರು.
ಸಿಐಟಿಯು
ಜಿಲ್ಲಾಧ್ಯಕ್ಷ ಎ.ಸಿ.ಸಾಬು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ಕಪಿಮುಷ್ಠಿಯಲ್ಲಿ ನಲುಗಿ ಸ್ವಾತಂತ್ರ್ಯ ಬಂದ ನಂತರವೂ ಪರಿಸ್ಥಿತಿ ಬದಲಾವಣೆಯಾಗಿಲ್ಲ. ಪ್ರಜಾಪ್ರಭುತ್ವದಲ್ಲಿ ಮತ ಪಡೆದು ಅಧಿಕಾರಕ್ಕೆ ಬಂದವರಿಂದ ಶೋಷಣೆ ಮುಂದುವರೆದಿದೆ. ಕನಿಷ್ಠ ವೇತನಕ್ಕೆ ಶ್ರಮಿಕ ವರ್ಗ ಅಂಗಲಾಚುವ ಪರಿಸ್ಥಿತಿ ನಿರ್ಮಾಣಗೊಂಡಿರುವುದು ಶೋಚನೀಯ ಸಂಗತಿ. ನಮ್ಮೆಲ್ಲರ ಬೇಡಿಕೆಗಳ ಈಡೇರಿಕೆಗೆ ಸಂಘಟನೆ ನಿರಂತರ ಹೋರಾಟ ಅತ್ಯಗತ್ಯ ಎಂದರು.
ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಜಮುನಾ ಮಾತನಾಡಿದರು.
ಸಿಐಟಿಯು ಇಂಡಸ್ಟ್ರಿಯಲ್ ಏರಿಯಾ ಅಧ್ಯಕ್ಷ
ಮಂಜು ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ಕೂಡಿಗೆ ಮತ್ತು ಕೂಡುಮಂಗಳೂರು ಕಾಂಗ್ರೆಟ್ ಕಾರ್ಮಿಕರು ಸದಸ್ಯತ್ವ ಪಡೆದುಕೊಂಡು ಸಂಘಟನೆಗೆ ಸೇರ್ಪಡೆಯಾದರು.
ಕೂಡುಮಂಗಳೂರು ಸದಸ್ಯೆ ಗೌರಮ್ಮ, ಕಾರ್ಯದರ್ಶಿ ಶಾಂತಾ ಇದ್ದರು.
ಕೂಡ್ಲೂರಿನ ವಿವಿಧ ಕಾಫಿ ಕ್ಯೂರಿಂಗ್ ವರ್ಕ್ಸ್ ನ ಮಹಿಳಾ ಕಾರ್ಮಿಕರು, ಕಟ್ಟಡ ಕಾರ್ಮಿಕರು ಪಾಲ್ಗೊಂಡಿದ್ದರು.
Back to top button
error: Content is protected !!