ಕುಶಾಲನಗರ, ನ 13: ಕುಶಾಲನಗರ ಪಟ್ಟಣದಲ್ಲಿ ಬೀದಿ ನಾಯಿಗಳ ಉಪಟಳ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು ನಾಯಿಗಳ ಹಾವಳಿ ನಿಯಂತ್ರಣಕ್ಕೆ ಒತ್ತಾಯಿಸಿ ಟಿ.ಎ.ನಾರಾಯಣ ಗೌಡರ ಕರ್ನಾಟಕ ರಕ್ಷಣಾ ವೇದಿಕೆ ಕುಶಾಲನಗರ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಕುಶಾಲನಗರ ಪಟ್ಟಣದಲ್ಲಿ ಇತ್ತೀಚಿನ ದಿನಗಳಿಂದ ಬೀದಿ ನಾಯಿಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಾಗರಿಕರ ಸುರಕ್ಷತೆ ಗಂಭೀರ ಚಿಂತೆಯ ವಿಷಯವಾಗಿದೆ. ವಿದ್ಯಾರ್ಥಿಗಳನ್ನು ಒಳಗೊಂಡು ಸುಮಾರು 80 ರಿಂದ 100 ಕ್ಕೂ ಹೆಚ್ಚು ಮಂದಿಗೆ ನಾಯಿಗಳ ಕಚ್ಚಿವೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಜನರಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದೆ.
ಪ್ರತಿ ದಿನ ಬೆಳಗಿನ ಜಾವ ವಾಕಿಂಗ್ ಮಾಡಲು ಬರುವ ನಾಗರಿಕರು. ಹಿರಿಯರು ಹಾಗೂ ಮಹಿಳೆಯರು ಸಹ ಈ ನಾಯಿಗಳಿಂದ ಅಪಾರ ತೊಂದರೆ ಅನುಭವಿಸುತ್ತಿದ್ದಾರೆ. ನಾಯಿ ಕಚ್ಚಿದವರಿಗೆ ಚಿಕಿತ್ಸೆ ನೀಡುವುದು ಸಹ ಒಂದು ದೊಡ್ಡ ಸವಾಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಪರಿಸ್ಥಿತಿಯ ಕುರಿತು ಅನೇಕ ಬಾರಿ ನಾಗರಿಕರು ಪುರಸಭೆಗೆ ಮನವಿ ಸಲ್ಲಿಸಿದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು ವಿಷಾದನೀಯವಾಗಿದೆ. ಆದ್ದರಿಂದ ಒಂದು ವಾರದ ಒಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರವರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ (ಕರವೆ) ಪುರಸಭೆ ಎದುರು ತೀವ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂಬುದಾಗಿ ಎಚ್ಚರಿಸಿ ವಾರದೊಳಗೆ ಕ್ರಮವಹಿಸಲು ಆಗ್ರಹಿಸಿ ಮುಖ್ಯಾಧಿಕಾರಿ ಗಿರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು. ಕರವೇ ತಾಲೂಕು ಅಧ್ಯಕ್ಷ ಬಿ.ಜೆ. ಅಣ್ಣಯ್ಯ ನೇತೃತ್ವದಲ್ಲಿ ರಾಜ್ಯ ಸಂಚಾಲಕಿ ದೀಪಾ ಪೂಜಾರಿ, ಜಿಲ್ಲಾಧ್ಯಕ್ಷೆ ಜ್ಯೋತಿ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆನಂದ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಾಗರ್, ತಾಲೂಕು ಉಪಾಧ್ಯಕ್ಷ ಎಸ್.ಎಸ್.ಫಯಾಜುದ್ದಿನ್, ಪ್ರಧಾನ ಕಾರ್ಯದರ್ಶಿ ಕುಮಾರ್ ಆರ್.ದೇವಾಂಗ, ಖಜಾಂಚಿ ರೊನಾಲ್ಡ್, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಗಣೇಶ್, ಹೋಬಳಿ ಅಧ್ಯಕ್ಷ ಕೆ.ಆರ್.ರಾಜೇಶ್, ನಗರಾಧ್ಯಕ್ಷ ಯೋಗೇಶ್ ಡಿ.ಆರ್, ತಾಲೂಕು ಮಹಿಳಾ ಪ್ರಧಾನ ಕಾರ್ಯದರ್ಶಿ ಶೈಲಾ ದೇವಾಂಗ, ನಗರ ಮಹಿಳಾ ಅಧ್ಯಕ್ಷೆ ಅನಿತಾ ದೇವಾಂಗ ಕೊಡಗು ಜಿಲ್ಲೆಯ ಮಹಿಳಾ ಪ್ರಧಾನ ಕಾರ್ಯದರ್ಶಿ ದಿವ್ಯ ದೇವಾಂಗ, ತಾಲೂಕು ಮಹಿಳಾ ಕಾರ್ಯದರ್ಶಿ ಸಿಂಧು, ಸದಸ್ಯರಾದ ಡಾಲಿ, ಅಬ್ದುಲ್ ಸಾಧಿಕ್, ಸೈಯದ್ ಜಾಕಿರ್, ಮುರುಳಿ, ಸಂಜೀವ್ ಮತ್ತಿತರರು ಇದ್ದರು.
Back to top button
error: Content is protected !!