ಕುಶಾಲನಗರ,ಅ೧೪: ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಿಗೆ ಅಪಮಾನಿಸಿದ ಘಟನೆಯನ್ನು ಖಂಡಿಸಿ ವಿಶ್ವಜ್ಞಾನಿ ಅಂಬೇಡ್ಕರ್ ಟ್ರಸ್ಟ್ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕುಶಾಲನಗರದ ಪ್ರವಾಸಿ ಮಂದಿರದ ಬಳಿಯಿಂದ ಮೆರವಣಿಗೆ ಬಂದ ಪ್ರತಿಭಟನಾಕಾರರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು. ನ್ಯಾಯಾಧೀಶರನ್ನು ಅಪಮಾನಿಸಿದ ವ್ಯಕ್ತಿಯನ್ನು ದೇಶದಿಂದಲೇ ಗಡಿಪಾರು ಮಾಡುವಂತೆ ಒತ್ತಾಯಿಸಿದ ಅವರು, ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಬಳಿಕ ಕುಶಾಲನಗರ ತಾಲ್ಲೂಕು ಕಚೇರಿಯತ್ತ ಮೆರವಣಿಗೆ ತೆರಳಿ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ ದಲಿತ ಮುಖಂಡ ಮೋಹನ್ ಮೌರ್ಯ, ದೇಶದಲ್ಲಿ ನ್ಯಾಯಾಧೀಶರಿಗೆ ಅಪಮಾನ ಮಾಡಿರುವುದು ಅತ್ಯಂತ ಖಂಡನೀಯ. ಕೃತ್ಯವೆಸಗಿದಾತನನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಟ್ರಸ್ಟ್ ನ ಅಧ್ಯಕ್ಷ ಲೋಕೇಶ್ ಮಾತನಾಡಿ, ಮುಖ್ಯನ್ಯಾಯಾಧೀಶರಿಗೆ ಅಪಮಾನ ಎಸಗಿರುವ ಕ್ರಮವನ್ನು ಪ್ರತಿಯೊಬ್ಬ ಭಾರತೀಯನೂ ಖಂಡಿಸಬೇಕು. ಇದು ಎಲ್ಲಾ ಭಾರತೀಯರಿಗೂ ಮಾಡಿರುವ ಅಪಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಸತೀಶ್ ಕುಮಾರ್, ಖಜಾಂಜಿ ಜ್ಞಾನವಾಣಿ ಸತೀಶ್, ನಿರ್ದೇಶಕರಾದ ಜೈವರ್ಧನ್ ಪ್ರಮುಖರಾದ ಸುರೇಶ್, ವೀರಭದ್ರ, ಶಿವಪ್ಪ, ಮಹೇಶ್, ರವಿ, ಕೆ.ಬಿ.ರಾಜು, ಮಂಜುನಾಥ್, ಅಣ್ಣಯ್ಯ, ಕೃಷ್ಣ, ಗೋವಿಂದರಾಜ್ ಮತ್ತಿತರರು ಇದ್ದರು.
Back to top button
error: Content is protected !!