ಕುಶಾಲನಗರ, ಸೆ 22:
ದಿನಾಂಕ: 21-09-2025 ರ ಭಾನುವಾರ ಮಡಿಕೇರಿಯ ರಾಜಾ ಸೀಟ್ ಬಳಿಯ ರಾಜ್ ದರ್ಶನ್ ನಲ್ಲಿ ಕರ್ನಾಟಕದ ಹೆಸರಾಂತ ಟಿ.ವಿ ವಾಹಿನಿಯಾದ ಸ್ಪಂದನ TV ಯವರು ಅರ್ಪಿಸುತ್ತಿರುವ ಕರುನಾಡು GOT TALENT ಮಲ್ಟಿ ಟ್ಯಾಲೆಂಟ್ ಟಿವಿ ರಿಯಾಲಿಟಿ ಶೋ ಆಡಿಷನ್ ನಲ್ಲಿ ಕುಶಾಲನಗರ ಕೂಡುಗೆಯ ನೃತ್ಯ ಸಂಯೋಜಕ ಅಕ್ತರ್ ರವರ ನೇತೃತ್ವದ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ನೃತ್ಯ ಪಟುಗಳು ಅತ್ಯುತ್ತಮ ನೃತ್ಯ ಪ್ರಕಾರವನ್ನು ನೀಡಿ ತೀರ್ಪುಗಾರರ ಮನಗೆದ್ದಿದ್ದಾರೆ. ಉತ್ತಮ ಪ್ರಯತ್ನದಿಂದ ನೇರವಾಗಿ ಮೇಘಾ ಆಡಿಷನ್ ಅಲ್ಲದೆ ಗೋಲ್ಡನ್ ಟಿಕೇಟ್ ತನ್ನದಾಗಿಸಿಕೊಂಡು ಟಿವಿ ರೌಂಡ್ ನಲ್ಲಿ ಆಯ್ಕೆಯಾಗಿರುತ್ತಾರೆ. ಪ್ರತೀ ಶನಿವಾರ ಮತ್ತು ಭಾನುವಾರ ಸ್ಪಂದನ ಟಿವಿ ವಾಹಿನಿಯಲ್ಲಿ ಪ್ರಸಾರವಾಗುವ ಕರುನಾಡು GOT TALENT ರಿಯಾಲಿಟಿ ಶೋ ನಲ್ಲಿ ಕೊಡಗಿನ ಹೆಮ್ಮೆಯ ನೃತ್ಯ ಪಟುಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಕರ್ನಾಟಕದ ಸುಮಾರು 12 ಜಿಲ್ಲೆಗಳಲ್ಲಿ ಆಡಿಷನ್ ನಡೆಯಲಿದ್ದು ಇದರಲ್ಲಿ ಕೊಡಗಿನ ಕುಶಾಲನಗರದ ಏಕೈಕ ನೃತ್ಯ ತಂಡವಾಗಿ ಎ ಕ್ರಿಯೇಟಿವ್ ಸಂಸ್ಥೆಯ ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಕೊಡಗಿನ ಜನತೆಯಲ್ಲಿ ಹೆಮ್ಮೆಯ ಮತ್ತು ಸಂತೋಷದ ವಿಷಯವಾಗಿದೆ. ಈ ಸಂದರ್ಭ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ಪೋಷಕರು ವಿದ್ಯಾರ್ಥಿಗಳು ಅತೀ ಹೆಚ್ಚಿನ ಶ್ರಮದಿಂದ ಉತ್ತಮ ನೃತ್ಯ ತರಬೇತಿಯ ಮೂಲಕ ಮಕ್ಕಳು ತನ್ನಲ್ಲಿ ಇರುವ ಪ್ರತಿಭೆಯನ್ನು ಹೊರಹಾಕಲು ಅವಕಾಶ ಮಾಡಿಕೊಟ್ಟ ಅನುಭವೀ ನೃತ್ಯ ಶಿಕ್ಷಕರಾದ ಅಕ್ತರ್ ರವರನ್ನು ಅಭಿನಂದಿಸಿದರು. ಹಾಗೆಯೇ ಎಲ್ಲಾ ವಿದ್ಯಾರ್ಥಿಗಳು ತೀರ್ಪುಗಾರರ ಮತ್ತು ಗಣ್ಯರ ಆಶೀರ್ವಾದದ ಮೂಲಕ ಆಡಿಷನ್ ವೇದಿಕೆಯಲ್ಲಿ ಗೋಲ್ಡನ್ ಟಿಕೇಟ್ ತನ್ನದಾಗಿಸಿಕೊಂಡು ಕುಣಿದು ಕುಪ್ಪಳಿಸುವ ಮೂಲಕ ಆನಂದಿಸಿ ಸಂಭ್ರಮಿಸಿದರು. ಈ ಸಂದರ್ಭ ನೃತ್ಯ ಸಂಯೋಜಕ ಅಕ್ತರ್ ಮಾತನಾಡಿ ನಮ್ಮ ನೃತ್ಯ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿಗಳು ಎಲ್ಲಾ ಪೋಷಕರ ಸಹಕಾರದಿಂದ ಮತ್ತು ವಿಧ್ಯಾರ್ಥಿಗಳ ನಂಬಿಕೆಯ ಶ್ರಮದಿಂದ ಆಯ್ಕೆಯಾಗಿರುತ್ತಾರೆ. ತಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹ ನಮ್ಮ ನೃತ್ಯ ಶಾಲೆಯ ಮಕ್ಕಳ ಮೇಲೆ ಸದಾ ಇರಲಿ ಮುಂದಿನ ದಿನಗಳಲ್ಲಿ ಕರುನಾಡು GOT TALENT ಫೈನಲ್ ತಲುಪಿ ಟ್ರೋಫಿ ತನ್ನದಾಗಿಸಿಕೊಳ್ಳಲು ಶ್ರಮಪಡುತ್ತೇವೆ ಎಂದು ತಿಳಿಸಿದರು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮತ್ತು ನೃತ್ಯ ಶಿಕ್ಷಕರಿಗೆ ಊರಿನ ಗುರುಹಿರಿಯರು, ಪೋಷಕರು ಮತ್ತು ಸ್ನೇಹಿತರು ಅಭಿನಂದನೆ ತಿಳಿಸಿದರು.
Back to top button
error: Content is protected !!