ಸಭೆ

ಮಿಷನ್ ಮೋದಿ ಡೆಮಾಕ್ರಸಿ ಡೆವೆಲೆಪ್ಮೆಂಟ್ ಟ್ರಸ್ಟ್ ಆಶ್ರಯದಲ್ಲಿ ಕುಶಾಲನಗರದಲ್ಲಿ ಶ್ರದ್ದಾಂಜಲಿ ಸಭೆ

ಕುಶಾಲನಗರ, ಮೇ 05: ಮಿಷನ್ ಮೋದಿ ಡೆಮಾಕ್ರಸಿ ಡೆವೆಲೆಪ್ಮೆಂಟ್ ಟ್ರಸ್ಟ್ ಆಶ್ರಯದಲ್ಲಿ ಕಾಶ್ಮೀರದ ಪೆಹೆಲ್ಗಾಮ್ ನಲ್ಲಿ ಪ್ರಾಣತ್ಯಾಗ ಮಾಡಿದ ಹಿಂದೂ ಬಾಂಧವರಿಗೆ ಮತ್ತು ಹಿಂದೂ ಕಾರ್ಯಕರ್ತ ದಿ.ವಿನಯ್ ಸೋಮಯ್ಯ ಅವರಿಗೆ ಶ್ರದ್ಧಾಂಜಲಿ ಸಭೆ ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರು ಟ್ಯಾಕ್ಸಿ‌ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿವಂಗತರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ನಮಿಸಿ ಮೌನಾಚರಣೆ‌ ಮೂಲಕ ನೆರೆದಿದ್ದವರು ಶ್ರದ್ಧಾಂಜಲಿ ಅರ್ಪಿಸಿದರು.

ಈ ಸಂದರ್ಭ ಮಾತನಾಡಿದ ಮಡಿಕೇರಿ ಕ್ಷೇತ್ರ ಮಾಜಿ ಶಾಸಕ ಅಪ್ಪಚ್ಚುರಂಜನ್, ಪೆಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದುಷ್ಕೃತ್ಯ ಅತ್ಯಂತ ಅಮಾನವೀಯ. ಇದಕ್ಕೆ ತಕ್ಕ ಉತ್ತರ ನೀಡಲೇಬೇಕಿದೆ. ಭಯೋತ್ಪಾದನೆ ಪೋಷಿಸುತ್ತಿರುವ ಪಾಕಿಸ್ತಾನವನ್ನು ಭೂಪಟದಲ್ಲಿ ಇಲ್ಲದಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರ ಅಗತ್ಯ ಕ್ರಮಕೈಗೊಳ್ಳುವ ಭರವಸೆಯಿದೆ. ದೇಶ ಉಳಿದರೆ‌ ಮಾತ್ರ ನಾವು. ದೇಶಕ್ಕಾಗಿ ಹೋರಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕಿದೆ.
ಭಾರತ ಪಾಕ್ ಯುದ್ದ ನಡೆದಲ್ಲಿ ತಾವುಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳಲು ಸಿದ್ದರಿರುವುದಾಗಿ ತಿಳಿಸಿದರು.
ಪೊಲೀಸರು ಕಾಂಗ್ರೆಸ್ ಪೊಲೀಸರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಪೊಲೀಸರ ಕುಮ್ಮಕ್ಕಿನಿಂದ ಸುಹಾಸ್ ಶೆಟ್ಟಿ ಹತ್ಯೆಯಾಗಿದೆ. ಕೊಡಗಿನಲ್ಲಿ ಕೂಡ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಇದುವರೆಗೆ ಸೂಕ್ತ ಕ್ರಮಕೈಗೊಂಡಿಲ್ಲ ಎಂದರು.

ವಿರಾಜಪೇಟೆ ಕ್ಷೇತ್ರ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಒಂದು ವರ್ಗವನ್ನು ಓಲೈಸುವ ಕೆಲಸ ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಹಿಂದೂ ಧರ್ಮದ ಪರ ಹೋರಾಡಿದ ಸುಹಾಸ್ ಶೆಟ್ಟಿ ಹತ್ಯೆ ವಿಷಾದನೀಯ. ವಾಟ್ಸಾಪ್ ಗ್ರೂಪ್ ಅಡ್ಮಿನ್ ಕೊಡಗಿನ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ಇದುವರೆಗೆ ನ್ಯಾಯ ದೊರೆತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೂಗಳು ಎಚ್ಚೆತ್ತುಕೊಳ್ಳಬೇಕಿದೆ. ಸಂಘಟಿತವಾದ ಸಮಾಜ ಕಟ್ಟುವ ಅಗತ್ಯವಿದೆ ಎಂದರು.

ನಿವೃತ್ತ ಮೇಜರ್ ನಂದ ಅವರು ಮಾತನಾಡಿದರು.

ಇದೇ ಸಂದರ್ಭ ಮೃತರ ಭಾವಚಿತ್ರಗಳನ್ನು ಹಿಡಿದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ‌ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಲಾಯಿತು.
ಮೆರವಣಿಗೆ ಮೂಲಕ ತಹಸೀಲ್ದಾರ್ ಕಛೇರಿಗೆ ತೆರಳಿ ಜಿಹಾದಿಗಳ ವಿರುದ್ದ ಉಗ್ರ ಕ್ರಮಕ್ಕೆ ಹಾಗೂ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಕಿರಣ್ ಗೌರಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಟ್ರಸ್ಟ್ ಜಿಲ್ಲಾ ಸಂಚಾಲಕ ವಿಷ್ಣು‌ನಾಚಪ್ಪ, ಮೈಸೂರು ಜಿಲ್ಲಾ ಅಧ್ಯಕ್ಷ, ಕೊಡಗು ಪ್ರಭಾರಿ ಮೈನಾ ಲೋಕೇಶ್, ಉಪಾಧ್ಯಕ್ಷ ಗಿರೀಶ್, ಸಂಘಟನಾ ಕಾರ್ಯದರ್ಶಿ ರವಿಶಂಕರ್, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್, ಕುಶಾಲನಗರ ಅಧ್ಯಕ್ಷ ಎಂ.ಎಂ.ಚರಣ್, ಪ್ರಧಾನ ಕಾರ್ಯದರ್ಶಿ ಮಧುಸೂದನ್, ಪ್ರಮುಖರಾದ ಅಮೃತ್‌ರಾಜ್, ಆರ್.ಕೆ.ಚಂದ್ರ, ಗಣಿಪ್ರಸಾದ್, ಎಂ.ಡಿ.ಕೃಷ್ಣಪ್ಪ, ಪ್ರವೀಣ್ ಕುಶಾಲಪ್ಪ, ಕುಡೆಕಲ್‌ ನಿತ್ಯಾನಂದ, ಹೆಚ್.ಎಸ್.ಅಶೋಕ್, ಕಾಂತಿ ಸತೀಶ್, ಕೆ.ಜಿ.ಮನು, ಜಿ.ಎಲ್.ನಾಗರಾಜ್, ಸೋಮೇಶ್, ಡಿ.ಕೆ.ತಿಮ್ಮಪ್ಪ, ದಿನೇಶ್, ಕೊಡಗನ ಹರ್ಷ, ಕುಲ್ಲಚನ ಹೇಮಂತ್, ಸೌಮ್ಯ, ನಂದಿನಿ, ಸುಶೀಲಾ, ಯಶೋಧ, ಮನು ನಂಜುಂಡ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!