ಅವ್ಯವಸ್ಥೆ
ನಗರೋತ್ಥಾನ ಕರ್ಮಕಾಂಡ: ಅಭಿವೃದ್ದಿ ನೆಪದಲ್ಲಿ ಕೆರೆಯನ್ನೆ ನುಂಗಿದ ಪಟ್ಟಣ ಪಂಚಾಯ್ತಿ.

ಸೋಮವಾರಪೇಟೆ, ಮಾ 15:- ಪಾರ್ಕ್ ನಿರ್ಮಾಣದ ಮೂಲಕ ದೈವಿಕ ಹಿನ್ನಲೆಯುಳ್ಳ ಕೆರೆಯನ್ನು ಅಭಿವೃದ್ದಿ ಪಡಿಸುವ ಕಾರ್ಯಕ್ಕೆ ಮುಂದಾದ ಪಟ್ಟಣ ಪಂಚಾಯ್ತಿ ಗುತ್ತಿಗೆ ದಾರನ ನಿರ್ಲಕ್ಷ್ಯದಿಂದ ಸಂಪೂರ್ಣ ಕೆರೆಯನ್ನು ಹಾಳುಗೆಡವಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯ ಸರ್ಕಾರ ಪಟ್ಟಣದ ಅಭಿವೃದ್ಧಿಗಾಗಿ ನಗರೋತ್ಥಾನ ಯೋಜನೆಯಡಿಯಲ್ಲಿ 5 ಕೋಟಿ ರೂಪಾಯಿ ಅನುದಾನ ಒದಗಿಸಿದ್ದು ಕಳೆದ ಒಂದೂವರೆ ವರ್ಷದ ಹಿಂದೆ ಗುದ್ದಲಿ ಪೂಜೆಯನ್ನು ಮಾಡಲಾಗಿದೆ. ಅಂದಿನಿಂದ ಇಂದಿನ ವರೆಗೂ ಪಂಚವಾರ್ಷಿಕ ಯೋಜನೆಯಂತೆ ಕಾಮಗಾರಿ ಕುಂಟುತ್ತಾ ಸಾಗಿದೆ. ಮೂಲ ಗುತ್ತಿಗೆದಾರ ಸ್ಥಳೀಯ ಗುತ್ತಿಗೆ ದಾರನಿಗೆ ತುಂಡುಗುತ್ತಿಗೆ ನೀಡಿದ್ದು ಇಷ್ಟಲ್ಲಾ ಅವಾಂತರಗಳಿಗೆ ಕಾರಣವಾಗಿದೆ.
ಈ ಯೋಜನೆಯಡಿಯಲ್ಲಿ ಕರ್ಕಲ್ಲಿಯ ಕಟ್ಟೆಬಸವೇಶ್ವರ ದೇವಾಲಯದ ಸಮೀಪ ದೈವಿಕ ಹಿನ್ನಲೆಯುಳ್ಳ 70 ಸೇಂಟ್ ವಿಸ್ತೀರ್ಣದ ಕೆರೆಯ ಪ್ರದೇಶವನ್ನು 18.49 ಲಕ್ಷ ರೂಪಾಯಿ ವೆಚ್ಚದಲ್ಲಿ ಪಾರ್ಕ್ ನಿರ್ಮಾಣದ ಮೂಲಕ ಯೋಜನೆ ರೂಪಿಸಿ ಕಾಮಗಾರಿ ಆರಂಭಿಸಲಾಯಿತು ಆದರೆ ಗುತ್ತಿಗೆದಾರನ ನಿರ್ಲಕ್ಷ್ಯ ,ಅಧಿಕಾರಿಗಳ ಅಸಡ್ಡೆ ಹಾಗೂ ಜನಪ್ರತಿನಿಧಿಗಳ ಇಚ್ಚಾ ಶಕ್ತಿಯ ಕೊರತೆಯಿಂದಾಗಿ ಯೋಜನೆ ನೆನೆಗುದಿಗೆ ಬಿದ್ದಿದೆ.
ಇದೆ ಗುತ್ತಿಗೆದಾರ ಅಕ್ಕಪಕ್ಕದಲ್ಲಿ ನಡೆಸಿದ ಕಾಮಗಾರಿಯ ಕಲ್ಲು,ಮಣ್ಣು ಮತ್ತಿತರೆ ತ್ಯಾಜ್ಯ ವಸ್ತುಗಳನ್ನು ಹಾಕಿ ರುವುದರಿಂದ ಸಂಪೂರ್ಣ ಕೆರೆ ತನ್ನ ಅಸ್ತಿತ್ವವನ್ನೇ ಕಳೆದು ಕೊಂಡಿದೆ ಗಿಡಗಂಟಿಗಳು ಬೆಳೆದು ಕಾಡುಪ್ರದೇಶವಾಗಿ ಮಾರ್ಪಟ್ಟಿದೆ. ಅನೈತಿಕ ಚಟುವಟಿಕೆಗೆ ಅವಕಾಶವಾಗಿದ್ದು ಪಕ್ಕದಲ್ಲಿಯೇ ಅಷ್ವತಮರ ಹಾಗೂ ನಾಗರಪ್ರತಿಷ್ಟೆ ಇದ್ದರೂ ಸಹ ಪಕ್ಕದಲ್ಲಿಯೇ ಪಾನಪ್ರಿಯರು ಪಾನಗೋಷ್ಟಿ ನಡೆಸಿ ಖಾಲಿ ಪ್ಯಾಕೆಟ್,ಬಾಟಲ್ಗಳನ್ನು ಅಲ್ಲಿಯೇ ಹಾಕಿದ್ದಾರೆ.ಸಿಕ್ಕವರೆಲ್ಲ ಕಸತಂದು ಹಾಕುತ್ತಿರುವುದರಿಂದ ಕಸದ ಕೊಂಪೆಯಾಗುತಿದೆ ಆದರೆ ಇಂತಹ ಅಸಡ್ಡೆ ವಹಿಸುತ್ತಿರುವ ಯಾರಿಗೂ ಕ್ಯಾರೇಎನ್ನದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಲು ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಕ್ರಮಕೈಗೊಳ್ಳಲು ಹಿಂದೇಟು ಹಾಕುತ್ತಿರುವಬಗ್ಗೆ ಅನುಮಾನಕ್ಕೆ ಕಾರಣವಾಗಿದೆ.
ಒಟ್ಟಿನಲ್ಲಿ ಗುತ್ತಿಗೆದಾರನ ಅಸಡ್ಡೆ,ಅಧಿಕಾರಿಗಳ ನಿರ್ಲಕ್ಷ್ಯ,ಜನಪ್ರತಿಂಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅಭಿವೃದ್ದಿ ಇಲ್ಲದೆ ದೈವಿಕ ಹಿನ್ನಲೆಯುಳ್ಳ ಕೆರೆಯನ್ನು ನುಂಗಿಹಾಕುರುವುದು ಸುಳ್ಳಲ್ಲ.
ಅಭಿಪ್ರಾಯ: ಸಾರ್ವಜನಿಕ ಉದ್ದೇಶದಿಂದ ಪಾರ್ಕ್ ನಿರ್ಮಿಸಲು 18 ಲಕ್ಷ ವೆಚ್ಚದ ಯೋಜನೆ ರೂಪಿಸಿ ಕಾಮಗಾರಿಗೆ ಚಾಲನೆ ನೀಡಿ ಒಂದೂವರೆ ವರ್ಷ ಆಗಿದೆ ಆದರೆ ಗುತ್ತಿಗೆದಾರ ಕೆಲಸ ಮಾಡುತ್ತಿಲ್ಲ,ಅಕ್ಕಪಕ್ಕದಲ್ಲಿ ಕೆಲಸಮಾಡಿದ ನಿರುಪಯುಕ್ತ ವಸ್ತುಗಳನ್ನು ಕೆರೆಯಾವರಣದಲ್ಲಿ ಹಾಕಿದ್ದಾರೆ. ಈ ಬಗ್ಗೆ ಸಭೆಯಲ್ಲಿ ಸಾಕಷ್ಟು ಗಮನ ಸೆಳೆದರು ಪ್ರಯೋಜನವಾಗಿಲ್ಲ.
-ಮೋಹಿನಿ, ವಾರ್ಡ್ ಸದಸ್ಯೆ.
……….


