ಕುಶಾಲನಗರ, ಮಾ 05:ಕುಶಾಲನಗರ ಪುರಸಭೆ ವ್ಯಾಪ್ತಿಯ ಅರ್.ಸಿ ಬಡಾವಣೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೌಲಾನಾ ಆಜಾದ್ ಮಾಡೆಲ್ ಶಾಲೆಯನ್ನು ಬೇರೆಡೆ ಸ್ಥಳಾಂತರಿಸಲು ಆರ್.ಕೆ.ಬಡಾವಣೆ, ಆರ್.ಸಿ.ಬಡಾವಣೆ, ಗುಂಡುರಾವ್ ಬಡಾವಣೆ ನಿವಾಸಿಗಳ ಒತ್ತಾಯಿಸಿದ್ದಾರೆ.
ಶಾಲೆ ನಿರ್ಮಾಣದಿಂದ ಉಂಟಾಗುವ ಸಾಧಕ ಬಾಧಕಗಳ ಕುರಿತು
ಬಡಾವಣೆಗಳ ಅಶ್ವಥಾಲಯ ಟ್ರಸ್ಟ್ ವತಿಯಿಂದ ನಿವಾಸಿಗಳ ಸಭೆ ನಡೆಯಿತು. ಶಾಲೆಯ ಗುಣಸ್ವರೂಪಕ್ಕೆ ಪೂರಕವಾಗಿ ಯೋಜನೆ ರೂಪಿಸಿಲ್ಲ, ಇದರಿಂದ ಬಡಾವಣೆಯಲ್ಲಿ ದಟ್ಟಣೆ ಅಧಿಕವಾಗುತ್ತದೆ, ವಸತಿ ಪ್ರದೇಶ ಸ್ವಭಾವಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಆರೋಪಿಸಿ ಸಾಂಕೇತಿಕ ಪ್ರತಿಭಟನೆ ಮೂಲಕ ಗಮನ ಸೆಳೆದರು.
ಶಾಲೆ ಬಗ್ಗೆ ಯಾವುದೇ ಆಕ್ಷೇಪವಿಲ್ಲ. ನಮ್ಮ ಹೋರಾಟ ಯಾವುದೇ ಸಮುದಾಯ ವಿರುದ್ದವಲ್ಲ. ಆದರೆ
ಉದ್ದೇಶಿತ ಶಾಲೆ ನಿರ್ಮಾಣ ಕಾಮಗಾರಿ ನಿಯಮಾನುಸಾರ ಕೈಗೊಂಡಿಲ್ಲ. ಶಾಲೆ ನಿರ್ಮಾಣಕ್ಕೆ ಬೇಕಾದ ಅಗತ್ಯ ಮೂಲ ಸೌಕರ್ಯಗಳ ಬಗ್ಗೆ ಗಮನಹರಿಸದೆ ಶಾಲೆ ನಿರ್ಮಿಸಲಾಗುತ್ತಿದೆ ಎಂಬುದು ನಿವಾಸಿಗಳ ಆರೋಪವಾಗಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವಥಾಲಯ ಟ್ರಸ್ಟ್ ಅಧ್ಯಕ್ಷ ನಾಗೇಂದ್ರ, ಸ್ಥಳೀಯ ಐದಾರು ಬಡಾವಣೆಗಳಿಗೆ ಸೇರಿ ಇರುವುದು ಇದೊಂದೇ ಉದ್ಯಾನವನ.
ಸಿಎ ಸೈಟ್ ಒಳಗೊಂಡಂತೆ ಒಂದುಮುಕ್ಕಾಲು ಎಕರೆ ಪ್ರದೇಶವನ್ನು ಸ್ವತಃ ಬಡಾವಣೆ ನಿವಾಸಿಗಳು 2 ಲಕ್ಷಕ್ಕೂ ಅಧಿಕ ಹಣ ವಿನಿಯೋಗಿಸಿ ಸುಂದರ ಉದ್ಯಾನವನ ರೂಪಕೊಟ್ಟು ಬಳಕೆ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಇದೀಗ 45 ಸೆಂಟ್ ಸಿಎ ಸೈಟ್ ನಲ್ಲಿ ಶಾಲೆ ನಿರ್ಮಾಣ ಕಾರ್ಯ ಆರಂಭಿಸಲಾಗಿದ್ದು, ಶಾಲೆಗೆ ಅಗತ್ಯವಿರುವ ಸಂಪರ್ಕ ರಸ್ತೆ, ಮೈದಾನ, ಪಾರ್ಕಿಂಗ್ ಮತ್ತಿತರ ಮೂಲಸೌಕರ್ಯ ಕೊರತೆ ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲೆಯನ್ನು ಬೇರೆಡೆ ವಿಶಾಲ ಪ್ರದೇಶದಲ್ಲಿ ನಿರ್ಮಿಸುವುದು ಒಳಿತು ಎಂದು ತಿಳಿಸಿದರು.
ಶಾಲೆ ನಿರ್ಮಾಣಕ್ಕೆ ಜಾಗ ಗುರುತಿಸುವ ಸಂಬಂಧ ಬಡಾವಣೆ ನಿವಾಸಿಗಳ ಗಮನಕ್ಕೆ ತಂದಿಲ್ಲ, ಅಭಿಪ್ರಾಯ ಪಡೆದಿಲ್ಲ. ಸರಕಾರದ ಮಾನದಂಡದಂತೆ ಒಂದು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಬೇಕಿರುವ ಶಾಲೆ ಕೇವಲ 45 ಸೆಂಟ್ ನಲ್ಲಿ ನಿರ್ಮಿಸಲು ಕಾಮಗಾರಿ ಆರಂಭಿಸಲಾಗಿದೆ. ಶಾಲೆಗೆ ಸಮರ್ಪಕ ಸಂಪರ್ಕ ರಸ್ತೆಯಿಲ್ಲ, ಪಾರ್ಕಿಂಗ್ ಸೌಲಭ್ಯವಿಲ್ಲ. ಈಗಿರುವ ಬಡಾವಣೆಯ ಕಿರಿದಾದ ರಸ್ತೆ ಹದಗೆಟ್ಟಿದೆ, ಶಾಲಾ ಮಕ್ಕಳಿಗೆ ಪ್ರತ್ಯೇಕ ಮೈದಾನ ಎಂಬುದಿಲ್ಲ, ಮುಂದಿನ ದಿನಗಳಲ್ಲಿ ಮಕ್ಕಳ ಆಟೋಟಗಳಿಗೆ ಪಕ್ಕದ ಉಳಿಕೆ ಪಾರ್ಕ್ ಜಾಗ ಮೈದಾನವಾಗಿ ಬಳಕೆಯಾಗುವ ಆತಂಕವಿದೆ. ಈ ನಿಟ್ಟಿನಲ್ಲಿ ಶಾಲೆಗೆ ಬೇರೆಡೆ ಜಾಗ ಗುರುತಿಸಿ ಅಲ್ಲಿ ನಿರ್ಮಿಸುವುದು ಒಳಿತು ಎಂದು
ಟ್ರಸ್ಟ್ ಉಪಾಧ್ಯಕ್ಷೆ ರಾಣಿ, ಕಾರ್ಯದರ್ಶಿ ಕಮಲ್, ಖಜಾಂಚಿ ಜಗನ್ನಾಥ್, ಪ್ರಮುಖರಾದ ಶಿವಕುಮಾರ್, ಪುಷ್ಪರಾವ್, ಚೈತ್ರ, ನಾಗಮಣಿ ಮತ್ತಿತರು ಒತ್ತಾಯಿಸಿದರು.
Back to top button
error: Content is protected !!