ಕುಶಾಲನಗರ, ಅ 11: ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ರಸುಲ್ ಪುರ ಮತ್ತು ಹೊಸಪಟ್ಟಣ ಗ್ರಾಮದ 16 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.
ವಿರುಪಾಕ್ಷಪುರದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ. ಪಿ.ಅಪ್ಪಚ್ಚು ರಂಜನ್ ಅವರು, 16 ಮಂದಿಗೆ ಹಕ್ಕುಪತ್ರ ವಿತರಣೆ ಮಾಡಿದರು. ನಂತರ ಮಾತನಾಡಿದ ಅವರು, ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಕಂದಾಯ ಇಲಾಖೆಗೆ 94(ಸಿ) ಅಡಿಯಲ್ಲಿ 7 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು ಪರಿಶೀಲನೆ ನಂತರ ಈಗಾಗಲೇ 5 ಸಾವಿರಕ್ಕೂ ಹೆಚ್ಚು ಅರ್ಜಿಗಳ ಅನುಗುಣವಾಗಿ ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬಾಕಿ ಉಳಿದ ಎಲ್ಲಾ ಅರ್ಜಿದಾರರಿಗೆ ಹಕ್ಕು ಪತ್ರವನ್ನು ವಿತರಣೆ ಮಾಡಲಾಗುವುದು. ಹಕ್ಕು ಪತ್ರದ ಅಧಾರದ ಮೇಲೆ ಸಾಲ ಸೌಲಭ್ಯಗಳನ್ನು ಪಡೆದು ಅರ್ಥಿಕವಾಗಿ ಮುಂದುವರಿಯಲು ಅನುಕೂಲವಿದ್ದು ಇದರ ಸದುಪಯೋಗ ಪಡೆದಕೊಳ್ಳುವಂತೆ ತಿಳಿಸಿದರು.
ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 62 ಅರ್ಜಿದಾರರು ಅರಣ್ಯ ಪ್ರದೇಶಕ್ಕೆ ಒಳಪಡುವ ಕಾರಣ ಅರಣ್ಯ ಹಕ್ಕು ಸಮಿತಿ ರಚಿಸಿ ಅಗತ್ಯ ದಾಖಲಾತಿಗಳನ್ನು ನೀಡಿದಲ್ಲಿ ಹಕ್ಕುಪತ್ರ ಮಂಜೂರಾಗಲಿದೆ. ಈ ನಿಟ್ಟಿನಲಿ ತಾನು ಖುದ್ದು ಸಭೆಯಲ್ಲಿ ಪಾಲ್ಗೊಂಡು ಅಗತ್ಯ ಮಾಹಿತಿ ಒದಗಿಸಲಿದ್ದೇನೆ. ಮುಂದಿನ ವಾರ ಹೊಸಪಟ್ಟಣ ಸಮುದಾಯ ಭವನದಲ್ಲಿ ಫಲಾನುಭವಿಗಳು ಸಭೆ ಸೇರಿ ಚರ್ಚಿಸಿ ಸಮಿತಿ ರಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂಜರಾಯಪಟ್ಟಣ ಗ್ರಾಪಂ ಸದಸ್ಯ ಆರ್.ಕೆ. ಚಂದ್ರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ನಂಜರಾಯ ಪಟ್ಟಣ ಗ್ರಾಮ ಪಂಚಾಯತಿ ಸದಸ್ಯರಾದ ರಕ್ಷಿತ್, ಗಿರಿಜಮ್ಮ, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯರಾದ ವಿಜು ಚೆಂಗಪ್ಪ, ವಲಯ ಅರಣ್ಯ ಅಧಿಕಾರಿ ಕೆ.ವಿ. ಶಿವರಾಮ್, ಐಟಿಡಿಪಿ ಜಿಲ್ಲೆಯ ಯೋಜನಾ ಸಮನ್ವಯಾಧಿಕಾರಿ ಎಸ್.ಹೊನ್ನೇಗೌಡ, ಕುಶಾಲನಗರ ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ಮಧುಸೂದನ್, ಕಂದಾಯ ಪರಿವೀಕ್ಷಕ ಸಂತೋಷ್, ಲೆಕ್ಕಾಧಿಕಾರಿ ಸಚಿನ್, ಅಭಿವೃದ್ಧಿ ಅಧಿಕಾರಿ ರಾಕೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
Back to top button
error: Content is protected !!