ಕುಶಾಲನಗರ, ಮಾ 11 ಕೊಡಗಿನ ವಿಚಾರದಲ್ಲಿ ಕಾಂಗ್ರೆಸ್ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು.
ಕುಶಾಲನಗರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟಿಸಿದ ಬಿಜೆಪಿಗರು ಕೊಡಗು ವಿವಿ ರದ್ದುಪಡಿಸಲು ಹೊರಟಿರುವ ಸರಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ಸಿ ಅಂಡ್ ಡಿ ಜಮೀನಿನ ವಿಚಾರದಲ್ಲಿ ರೈತರಿಗೆ ಅನ್ಯಾಯ ಮಾಡುತ್ತಿದೆ, ಸಮುದಾಯಗಳ ಅಭಿವೃದ್ದಿಗೆ ಮೀಸಲಿಟ್ಟು ಹಣವನ್ನು ಉಚಿತ ಭಾಗ್ಯಗಳಿಗೆ ಬಳಸಲಾಗುತ್ತಿದೆ, ರಾಜ್ಯದ ಅಭಿವೃದ್ದಿಗೆ ಮಾರಕವಾದ ಬಜೆಟ್ ಮಂಡಿಸಲಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಲಾಯಿತು.
ಸರಕಾರ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕೊಡಗಿನ ಶಾಸಕರ ವಿರುದ್ದ ಧಿಕ್ಕಾರ ಕೂಗಿ ಕೆಲಕಾಲ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಲಾಯಿತು.
ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಅಪ್ಪಚ್ಚುರಂಜನ್, ಬಿಜೆಪಿ ಸರಕಾರ ಕೊಡಗಿಗೆ ನೀಡಿದ ವಿಶ್ವವಿದ್ಯಾಲಯವನ್ನು ಅನುದಾನದ ಕೊರತೆಯ ನೆಪವೊಡ್ಡಿ ಕಾಂಗ್ರೆಸ್ ಸರಕಾರ ರದ್ದುಪಡಿಸಲು ಮುಂದಾಗಿರುವುದು ಸರಿಯಲ್ಲ. ವಿಲೀನ ಮಾಡುವುದು, ರದ್ದುಮಾಡುವುದು ಎಲ್ಲಾ ಒಂದೇ. ಆರ್ಥಿಕವಾಗಿ ಹಿಂದುಳಿದ ಶೇ.80 ರಷ್ಟು ವಿದ್ಯಾರ್ಥಿಗಳಿಗೆ ಇದರಿಂದ ಅನಾನುಕೂಲ ಉಂಟಾಗಲಿದೆ. ವಿವಿ ಉಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನಿಂದ ಹೋದ ನಿಯೋಗಕ್ಕೆ ಶುಭಾಶಯಗಳ ಮಹಾಪೂರ ಹರಿದುಬರುತ್ತಿರುವುದು ಹಾಸ್ಯಾಸ್ಪದ.
ಕೊಡಗಿನ ಇಬ್ಬರು ಶಾಸಕರಿಗೆ ಕೊಡಗಿನ ಕಷ್ಟ ಸುಖಗಳ ಬಗ್ಗೆ ಅರಿವಿಲ್ಲ ಎಂದು ಆರೋಪಿಸಿದರು. ಕೊಡಗು ವಿವಿ ರದ್ದುಗೊಳಿಸುವುದಿಲ್ಲ ಎಂಬ ಭರವಸೆ ನೀಡುವ ತನಕ ಬಿಜೆಪಿಯ ಹೋರಾಟ ಮುಂದುವರೆಯಲಿದೆ. ಬಿಜೆಪಿಯಿಂದಲೂ ಕೂಡ ಸರಕಾರಕ್ಕೆ, ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ರಾಜ್ಯಪಾಲರ ಭೇಟಿ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗುವುದು. ನಂಜುಂಡಪ್ಪ ಆಯೋಗದ ವರದಿಯಂತೆ ಕೊಡಗಿನಲ್ಲಿ ಶಿಕ್ಷಣ ಹಾಗೂ ರಸ್ತೆಗಳ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದಿದೆ. ಆದರೆ ಕೊಡಗಿನಿಂದ ಕಾವೇರಿ ನೀರಿನ ಉಪಯೋಗ ಪಡೆಯುವ ಸರಕಾರ ವಿವಿಯನ್ನು ಮುಚ್ಚಲು ಹೊರಟಿರುವುದು ಕೊಡಗಿಗೆ ಮಾಡುತ್ತಿರುವ ಅನ್ಯಾಯ. ವಿವಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾನೂನಾತ್ಮಕವಾಗಿ ಕೂಡ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಕೊಡಗಿನ ಸಮಸ್ಯೆಗಳ ಬಗ್ಗೆ ಈಗಾಗಲೆ ಬಿಜೆಪಿ ಪ್ರತಿಭಟನೆ ಮೂಲಕ ಸರಕಾರ ಗಮನ ಸೆಳೆದಿದೆ. ಆದರೆ ಬಜೆಟ್ ನಲ್ಲಿ ಅವುಗಳಿಗೆ ಆದ್ಯತೆ ನೀಡದ ಕಾಂಗ್ರೆಸ್ ಸರಕಾರ ಕೇವಲ ಒಂದು ವರ್ಗದ ಓಲೈಕೆ ಬಜೆಟ್ ಮಂಡಿಸಿದೆ. ಕೊಡಗು ವಿವಿ ಪರ ಜಿಲ್ಲೆಯ ಶಾಸಕರ ದನಿ ಎತ್ತಬೇಕಿದೆ. ವಿವಿ ರದ್ದತಿ ವಿರುದ್ದ ಭುಗಿಲೆದ್ದ ಆಕ್ರೋಷದಿಂದ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದಾರೆ. ಕೊಡಗು ವಿವಿ ಉಳಿವಿಗೆ ಆಗ್ರಹಿಸಿ ಕೊಡಗು ಬಂದ್ ಕೂಡ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ
ಭಾರತೀಯ ಜನತಾ ಪಕ್ಷದ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ರಾಬಿನ್ ದೇವಯ್ಯ, ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ್, ವಿರಾಜಪೇಟೆ ಮಂಡಲ ಅಧ್ಯಕ್ಷ ಸುವಿನ್ ಗಣಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ಜಿಲ್ಲಾ ಉಪಾಧ್ಯಕ್ಷ ಆರ್.ಕೆ.ಚಂದ್ರು, ಮಾದಪ್ಪ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ರಕ್ಷಿತ್ ಮಾವಾಜಿ, ಮಂಡಲ ಯುವ ಮೋರ್ಚಾ ಅಧ್ಯಕ್ಷ ಮೋಹಿತ್, ಮಂಡಲ ಉಪಾಧ್ಯಕ್ಷ ಕಿಟ್ಟಿ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪ ನಾಗೇಶ್, ಕುಶಾಲನಗರ ನಗರ ಘಟಕದ ಅಧ್ಯಕ್ಷ ಚರಣ್, ನಗರ ಪ್ರಧಾನ ಕಾರ್ಯದರ್ಶಿ ಮಧುಸೂದನ್, ಯುವ ಮೋರ್ಚಾ ಅಧ್ಯಕ್ಷ ರಾಮನಾಥನ್, ಕಾರ್ಯದರ್ಶಿ ಸಚಿನ್, ಆದರ್ಶ್, ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷ ಪ್ರವೀಣ್ ಕುಶಾಲಪ್ಪ, ಕೂಡುಮಂಗಳೂರು ಅಧ್ಯಕ್ಷ ಭಾಸ್ಕರ್ ನಾಯಕ್, ಪ್ರಮುಖರಾದ ಜೈವರ್ಧನ್, ಅಮೃತ್ರಾಜ್, ಡಿ.ಕೆ.ತಿಮ್ಮಪ್ಪ, ಚಂದ್ರಶೇಖರ್ ಹೇರೂರು, ನವನೀತ್, ಪ್ರಭಾಕರ್, ದಿನೇಶ್, ಮಣಿಕಂಠ, ಅವಿನಾಶ್, ಸಂತೋಷ್, ಇಂದಿರಾ ರಮೇಶ್, ನಿತ್ಯಾನಂದ, ಕೆ.ಜಿ.ಮನು, ಉಮಾಶಂಕರ್, ವೈಶಾಖ್ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಘಟಕಗಳ ಪ್ರಮುಖರು, ಕಾರ್ಯಕರ್ತರು ಇದ್ದರು.
Back to top button
error: Content is protected !!