ಕುಶಾಲನಗರ, ಏ 23 : ಹನ್ನೆರಡನೇ ಶತಮಾನದಲ್ಲಿ ಸಮಾಜದ ಸ್ವಾಸ್ಥ್ಯ ಕದಡುತ್ತಿದ್ದವರನ್ನು ಪರಿವರ್ತಿಸಿ ಅವರಲ್ಲಿ ಅರಿವಿನ ಜ್ಯೋತಿ ಹಚ್ಚಿದವರು ಹನ್ನೆರಡನೇ ಶತಮಾನದ ಶ್ರೇಷ್ಠ ವಚನಕಾರ್ತಿ ಅಕ್ಕ ಮಹಾದೇವಿ ಎಂದು ಉಪನ್ಯಾಸಕಿ ಅನಿತಾ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದಿಂದ ಕುಶಾಲನಗರದ ಕನ್ನಡ ಭಾರತಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಇಂದಿನ ಹೆಣ್ಣು ಮಕ್ಕಳಿಗೆ ಅಕ್ಕ ಮಹಾದೇವಿಯ ಬದುಕು ಅನುಕರಣೀಯವಾಗಬೇಕಿದೆ.
ತನು – ಮನಗಳಲ್ಲಿ ಪರಿಶುದ್ಧತೆ, ಅರಿವು, ಭಾವಶುದ್ದಿ, ತ್ರಿಕರಣ ಶುದ್ದಿ, ಸಹೃದಯತೆ ಇದ್ದಾಗ ಮಾತ್ರ ಶಿವನು ಭಕ್ತನ ಪೂಜೆಯನ್ನು ಸ್ವೀಕರಿಸುತ್ತಾನೆ ಎನ್ನುವ ಆಶಯದ ಮೂಲಕ ನಿಜವಾದ ಭಕ್ತನಲ್ಲಿ ಇರಬೇಕಾದ ಅಂತರಂಗ ಶುದ್ದಿಯನ್ನು ಇಡೀ ಜೀವನದ ಉದ್ದಕ್ಕೂ ಪ್ರತಿಪಾದಿಸಿದರು. ಅಲ್ಲದೇ ವ್ಯಕ್ತಿ ತಾನು ಒಳ್ಳೆಯವನಾದರೆ ಸಮಾಜವೂ ಒಳ್ಳೆಯದಾಗುತ್ತದೆ ಎಂಬ ಧ್ಯೇಯ ಅಕ್ಕಮಹಾದೇವಿಯಲ್ಲಿತ್ತು.
ಅಂತಹ ಶ್ರೇಷ್ಠ ವಚನಕಾರ್ತಿಯ ಬದುಕು ಇಂದಿನ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು ಎಂದು ಅಕ್ಕನ ವಚನಗಳನ್ನು ಅನಿತಾ ವಿಶ್ಲೇಷಿಸಿದರು.
ಮುಖ್ಯ ಅತಿಥಿ ಕನ್ನಡ ಭಾರತಿ ಪದವಿ ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ರುದ್ರಪ್ಪ ಮಾತನಾಡಿ, ಹುಟ್ಟು ಮತ್ತು ಮುಟ್ಟುಗಳ ವಿಷಯದಲ್ಲಿ ಮೈಲಿಗೆಯ ಸೂತಕವನ್ನು ಆಚರಿಸುತ್ತಿದ್ದ ಕೆಟ್ಟ ಪರಂಪರೆಯ ವಿರುದ್ಧ ಹೋರಾಟ ನಡೆಸಿ ಮಹಿಳಾ ಕುಲಕ್ಕೆ ಅತೀ ದೊಡ್ಡ ಗೌರವ ತಂದು ಕೊಟ್ಟ ಅಕ್ಕಮಹಾದೇವಿ ಹನ್ನೆರಡನೇ ಶತಮಾನದ ಶ್ರೇಷ್ಠ ವಚನಕಾರ್ತಿ.
ಹಾಗೆಯೇ ಮೇಲು – ಕೀಳೆಂಬ ಜಾತಿ ಪದ್ದತಿಯ ವಿರುದ್ಧ ಹೋರಾಡಿ ಸಮಾನತೆಯನ್ನು ಸಾರಿದ ಬಸವಣ್ಣ ಈ ನೆಲದ ಮೇರು ಸಾಂಸ್ಕ್ರತಿಕ ನಾಯಕ ಎಂದು ಬಣ್ಣಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ
ವಿದ್ಯಾರ್ಥಿಗಳು ಓದಿನ ಜೊತೆಗೆ ವಚನಕಾರರ ಆದರ್ಶದ ಬದುಕನ್ನು ಅರಿತಲ್ಲಿ ವ್ಯಕ್ತಿತ್ವ ವಿಕಸನವಾಗುತ್ತದೆ.
ಈ ನಿಟ್ಟಿನಲ್ಲಿ ವಚನಕಾರರ ಬಗ್ಗೆ ಅರಿವು ಮೂಡಿಸುವುದೇ ಶರಣ ಸಾಹಿತ್ಯ ಪರಿಷತ್ತಿನ ಧ್ಯೇಯ ಎಂದರು.
ಉಪನ್ಯಾಸಕರಾದ
ಮಂಜುನಾಥ್, ಪ್ರಸನ್ನಮೂರ್ತಿ, ದಿವ್ಯ, ದರ್ಶಿನಿ, ನಾಗರತ್ನ, ಹರ್ಷಿತಾ ಇದ್ದರು.
ವಿದ್ಯಾರ್ಥಿನಿ
ದೀಕ್ಷಾ ಸ್ವಾಗತಿಸಿ ವಂದಿಸಿದರು.
ವರಲಕ್ಷ್ಮಿ ನಿರೂಪಿಸಿದರು.
Back to top button
error: Content is protected !!