ಕಾರ್ಯಕ್ರಮ
ಕೊಡಗು ವಿವಿ ನೂತನ ವೆಬ್ಸೈಟ್ ಲೋಕಾರ್ಪಣೆ ಮಾಡಿದ ರಾಜ್ಯಪಾಲರು
ಕುಶಾಲನಗರ, ಮೇ 27: ಕೊಡಗು ವಿಶ್ವವಿದ್ಯಾಲಯವು ಕರ್ನಾಟಕ ಸರ್ಕಾರದ ಇ-ಆಡಳಿತ ಕೇಂದ್ರ, ಬೆಂಗಳೂರು ಇವರ ಸಹಯೋಗದೊಂದಿಗೆ ವಿನ್ಯಾಸಗೊಳಿಸಿ ಅಭಿವೃದ್ಧಿ ಪಡಿಸಿದ ನೂತನ ವೆಬ್‌ಸೈಟ್ (kuk.karnataka.gov.in) ಅನ್ನು ಕರ್ನಾಟಕ ರಾಜ್ಯದ ರಾಜ್ಯಪಾಲರು ಹಾಗೂ ಕೊಡಗು ವಿಶ್ವವಿದ್ಯಾಲಯದ ಕುಲಾಧಿಪತಿಗಳು ಆಗಿರುವ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದಲ್ಲಿ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂ. ಆಲೂರ ಅವರು ವಿಶ್ವವಿದ್ಯಾಲಯದ ಪರವಾಗಿ ರಾಜ್ಯಪಾಲರನ್ನು ಹೂಗುಚ್ಛ ನೀಡಿ ಗೌರವಿಸಿ ಸ್ವಾಗತಿಸಿದರು. ವಿಶ್ವವಿದ್ಯಾಲಯದ ವೆಬ್‌ಸೈಟ್ ಅನಾವರಣಗೊಳಿಸಿದ ರಾಜ್ಯಪಾಲರು ವಿಶ್ವವಿದ್ಯಾಲಯದ ಶ್ರೇಯೋಭಿವೃದ್ಧಿಗೆ ಶುಭಕೋರಿದರು.
ಇದೇ ಸಂದರ್ಭದಲ್ಲಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ, ಆಪ್ತಕಾರ್ಯದರ್ಶಿ, ಎಡಿಸಿ, ವಿಶೇಷ ಅಧಿಕಾರಿಗಳು, ಇ-ಆಡಳಿತ ಕೇಂದ್ರದ ಪ್ರತಿನಿಧಿಗಳು ಹಾಗೂ ರಾಜಭವನದ ವಿಶ್ವವಿದ್ಯಾಲಯ ವಿಭಾಗದ ಅಧಿಕಾರಿಗಳು ಹಾಜರಿದ್ದರು.
ಕೊಡಗು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಉಪನ್ಯಾಸಕರು, ಆಡಳಿತ ಸಿಬ್ಬಂದಿಗಳು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಅಂತರ್‌ಜಾಲದ ಮುಖಾಂತರ ಸಾಕ್ಷಿಯಾದರು.
ಕೊಡಗು ವಿಶ್ವವಿದ್ಯಾಲಯದ ಪ್ರವೇಶಾತಿ ಸಂಬಂಧ ಎಲ್ಲಾ ಮಾಹಿತಿಗಳನ್ನು ವೆಬ್‌ಸೈಟ್ (kuk.karnataka.gov.in) ಮೂಲಕ ಪಡೆಯಬಹುದಾಗಿದೆ.