ಕುಶಾಲನಗರ : ಕೊಡಗು ಜಿಲ್ಲೆಯಲ್ಲಿ Rapido ಮತ್ತು Rental Bike ಸೇವೆಗಳನ್ನು ಆರಂಭಿಸುವ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಪತ್ರಿಕೆ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಹಾಗೂ ಜನಪರ ಹೋರಾಟಗಾರ ಭಾಸ್ಕರ್ ನಾಯಕ್ ರವರು ಜಿಲ್ಲೆಯ ಆಟೋ ಚಾಲಕರು ವ್ಯಕ್ತಪಡಿಸಿರುವ ಆತಂಕ ಹಾಗೂ ವಿರೋಧವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ನೆನ್ನೆ ಮಡಿಕೇರಿಯಲ್ಲಿ ಆಟೋ ಚಾಲಕರು ನಡೆಸಿದ ಪ್ರತಿಭಟನೆ ಅವರ ಜೀವನೋಪಾಯದ ಕುರಿತಾದ ನೋವು ಮತ್ತು ಆತಂಕವನ್ನು ಪ್ರತಿಬಿಂಬಿಸುತ್ತದೆ.
ಕೊಡಗು ಜಿಲ್ಲೆಯ ಸಾವಿರಾರು ಕುಟುಂಬಗಳು ಆಟೋ ಚಾಲನೆಯನ್ನೇ ಜೀವನಾಧಾರವಾಗಿಸಿಕೊಂಡಿವೆ. ವಾಹನ ಖರೀದಿಗೆ ಮಾಡಿದ ಸಾಲ, ಬ್ಯಾಂಕ್ ಕಂತುಗಳು, ವಾಹನ ನಿರ್ವಹಣೆ, ಕುಟುಂಬದ ನಿರ್ವಹಣೆ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಹೊತ್ತು ಆಟೋ ಚಾಲಕರು ಬದುಕು ಸಾಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ Rapido ಮತ್ತು Rental Bike ಸೇವೆಗಳಿಗೆ ಅವಕಾಶ ನೀಡಿದರೆ ಈಗಾಗಲೇ ಸಂಕಷ್ಟದಲ್ಲಿರುವ ಸ್ಥಳೀಯ ಆಟೋ ಚಾಲಕರ ಆದಾಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಕೊಡಗು ಜಿಲ್ಲೆಯ ಭೌಗೋಳಿಕ ಪರಿಸ್ಥಿತಿ, ಪ್ರವಾಸೋದ್ಯಮದ ಸ್ವರೂಪ ಹಾಗೂ ಸ್ಥಳೀಯ ಸಾರಿಗೆ ವ್ಯವಸ್ಥೆಯನ್ನು ಗಮನಿಸಿದರೆ ಸದ್ಯಕ್ಕೆ ಇಂತಹ ಸೇವೆಗಳ ಅವಶ್ಯಕತೆ ಇಲ್ಲ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಆದ್ದರಿಂದ ಜಿಲ್ಲೆಯ ಎಲ್ಲಾ ಆಟೋ ಚಾಲಕರು ಒಗ್ಗಟ್ಟಿನಿಂದ ತಮ್ಮ ಹಕ್ಕು ಮತ್ತು ಜೀವನೋಪಾಯದ ರಕ್ಷಣೆಗಾಗಿ ನಡೆಸುತ್ತಿರುವ ಹೋರಾಟಕ್ಕೆ ಸಾರ್ವಜನಿಕರು ಕೂಡ ಬೆಂಬಲ ನೀಡಬೇಕು.
ಆದರೆ ಆಟೋ ಚಾಲಕರಿಗೂ ಒಂದು ಜವಾಬ್ದಾರಿಯಿದೆ. ಸಾರ್ವಜನಿಕರ ಬೆಂಬಲವನ್ನು ನಿರೀಕ್ಷಿಸುವ ಆಟೋ ಚಾಲಕರು ಕೂಡ ಪ್ರಯಾಣಿಕರ ಹಿತಾಸಕ್ತಿಯನ್ನು ಕಾಪಾಡಬೇಕು. ಜಿಲ್ಲೆಯ ಎಲ್ಲಾ ಆಟೋಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಿ, ಮೀಟರ್ ದರದಂತೆ ಪ್ರಯಾಣಿಕರಿಂದ ಬಾಡಿಗೆ ಪಡೆಯಬೇಕು. ಮನಬಂದಂತೆ ಬಾಡಿಗೆ ಕೇಳುವುದು, ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುವುದು ಹಾಗೂ ಪ್ರಯಾಣಿಕರಿಗೆ ಅನಗತ್ಯ ತೊಂದರೆ ನೀಡುವ ದೂರುಗಳಿಗೆ ಅವಕಾಶ ನೀಡಬಾರದು.
ಆಟೋ ಚಾಲಕರ ಬದುಕು ಉಳಿಯಬೇಕು, ಅದೇ ರೀತಿ ಸಾರ್ವಜನಿಕರಿಗೆ ನ್ಯಾಯಯುತ ದರದಲ್ಲಿ ಉತ್ತಮ ಸಾರಿಗೆ ಸೇವೆಯೂ ದೊರೆಯಬೇಕು. ಇದು ಪರಸ್ಪರ ನಂಬಿಕೆ ಮತ್ತು ಸಹಕಾರದಿಂದ ಮಾತ್ರ ಸಾಧ್ಯ.
ಸ್ಥಳೀಯ ಆಟೋ ಚಾಲಕರ ಬದುಕಿಗೆ ಧಕ್ಕೆ ತರುವ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಜಿಲ್ಲಾಡಳಿತ ಸ್ಥಳೀಯರ ಹಿತಾಸಕ್ತಿಯನ್ನು ಪರಿಗಣಿಸಬೇಕು. ಕೊಡಗು ಜಿಲ್ಲೆಯಲ್ಲಿ ಸದ್ಯಕ್ಕೆ Rapido ಮತ್ತು Rental Bike ಸೇವೆಗಳಿಗೆ ಅವಕಾಶ ನೀಡಬಾರದು. ಆಟೋ ಚಾಲಕರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಜೀವನೋಪಾಯದ ರಕ್ಷಣೆಗೆ ಸರ್ಕಾರ ಮತ್ತು ಜಿಲ್ಲಾಡಳಿತ ಮುಂದಾಗಬೇಕು ಎಂದು ಭಾಸ್ಕರ್ ನಾಯಕ್ ಆಗ್ರಹಿಸಿದ್ದಾರೆ.
Back to top button
error: Content is protected !!