ಅರಣ್ಯ ವನ್ಯಜೀವಿ

ಸುರಕ್ಷತಾ ವಿಧಾನಗಳೊಂದಿಗೆ ಶಿಬಿರಕ್ಕೆ ಸಾರ್ವಜನಿಕರ ಭೇಟಿಗೆ ಅವಕಾಶ

ಕುಶಾಲನಗರ, ಸೆ 20: (ಕುಶಲವಾಣಿ): ಸುರಕ್ಷತಾ ವಿಧಾನಗಳೊಂದಿಗೆ ದುಬಾರೆ ಸಾಕಾನೆ ಶಿಬಿರಕ್ಕೆ ಸಾರ್ವಜನಿಕರ ಭೇಟಿಗೆ ಭಾನುವಾರದಿಂದ ಅವಕಾಶ ಕಲ್ಪಿಸಲಾಗಿದೆ.
ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಅವರು ಪ್ರವಾಸಿಗರಿಗೆ ಆನೆ ಶಿಬಿರಕ್ಕೆ ತೆರಳುವ ಸ್ವಾಗತ ಕೇಂದ್ರದಲ್ಲಿ ಟಿಕೆಟ್ ವಿತರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಶಾಸಕರು, ಈ ಹಿಂದೆ ಶಿಬಿರದಲ್ಲಿ ಅಹಿತಕರ ಘಟನೆಯೊಂದು ನಡೆದಿದ್ದು ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಪ್ರತಿಯೊಬ್ಬರೂ ಕೈಜೋಡಿಸಿ ದುಬಾರೆ ಆನೆ ಶಿಬಿರದ ಅಭಿವೃದ್ಧಿಯೊಂದಿಗೆ ಅತ್ಯುತ್ತಮ ಪ್ರವಾಸಿ ಕೇಂದ್ರವನ್ನಾಗಿ ರೂಪಿಸುವಂತಾಗಬೇಕು ಎಂದರು.ಕುಶಲವಾಣಿ.ಸಾರ್ವಜನಿಕರು ಪ್ರವಾಸಿಗರು ಅರಣ್ಯ ಇಲಾಖೆ ರೂಪಿಸಿರುವ ಸುರಕ್ಷಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಮೂಲಕ ಯಾವುದೇ ಸಂದರ್ಭ ಆನೆಗಳಿಗೆ ಕಿರಿಕಿರಿ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದ ಶಾಸಕರು ಶಿಬಿರದಲ್ಲಿ ಮೇ ತಿಂಗಳಲ್ಲಿ ನಡೆದ ಪ್ರವಾಸಿ ಮಹಿಳೆಯ ದಾರುಣ ಸಾವು ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಎರಡು ಆನೆಗಳ ನಡುವೆ ನಡೆದ ಕಾಳಗದಲ್ಲಿ ಮಹಿಳೆ ಸಾವು ಹಾಗೂ ಆನೆ ಒಂದು ಗಾಯಗೊಂಡು ಮೃತಪಟ್ಟಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಶಾಸಕ ಡಾ ಮಂತರ್ ಗೌಡ ಯಾವುದೇ ರೀತಿಯಲ್ಲಿ ಇಂತಹ ಅನಾಹುತಗಳು ಮರುಕಳಿಸಿದಂತೆ ಪ್ರತಿಯೊಬ್ಬರೂ ಕಾಳಜಿ, ಮುನ್ನೆಚ್ಚರಿಕೆ ವಹಿಸಬೇಕಾಗಿದೆ ಎಂದರು.

ಶಿಬಿರದ ಸುರಕ್ಷತಾ ವಿಧಾನಗಳ ಬಗ್ಗೆ ಮಡಿಕೇರಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ವಿ ಅಭಿಷೇಕ್ ಅವರೊಂದಿಗೆ ಸಂಪೂರ್ಣ ಮಾಹಿತಿ ಪಡೆದರು.ಕುಶಲವಾಣಿ.ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಅಭಿಷೇಕ್ ಮಾತನಾಡಿ, ಪ್ರಾರಂಭದಲ್ಲಿ ದಿನನಿತ್ಯ ಬೆಳಗ್ಗೆ 9:30ಯಿಂದ 11:30 ತನಕ 2 ಗಂಟೆಗಳ ಕಾಲ ಸೀಮಿತವಾಗಿ ಪ್ರವಾಸಿಗರಿಗೆ ಭೇಟಿಗೆ ಅವಕಾಶ ಕಲ್ಪಿಸಲಾಗುವುದು. ಒಂದು ತಂಡದಲ್ಲಿ 150 ಪ್ರವಾಸಿಗರಿಗೆ ಮಾತ್ರ ಭೇಟಿಗೆ ಅವಕಾಶ ನಂತರ ತಂಡ ತಂಡವಾಗಿ ಶಿಬಿರಕ್ಕೆ ತೆರಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು. ಪ್ರಸಕ್ತ ಶಿಬಿರದ ಹತ್ತು ಆನೆಗಳನ್ನು ಮಾತ್ರ ಪ್ರವಾಸಿಗರ ಭೇಟಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ಪ್ರತಿ ಮಂಗಳವಾರ ಶಿಬಿರಕ್ಕೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿದೆ. ಆ ದಿನದಂದು ಶಿಬಿರದ ನಿರ್ವಹಣಾ ಕಾರ್ಯ ನಡೆಯಲಿದೆ ಎಂದರು.ಕುಶಲವಾಣಿ.ಮುಂದಿನ ದಿನಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಪ್ರವಾಸಿಗರ ಭೇಟಿಗೆ ಹೆಚ್ಚಿನ ಅವಧಿ ನಿಗದಿಪಡಿಸಲು ಚಿಂತಿಸಲಾಗಿದೆ ಎಂದರು.

ಕೇಂದ್ರದಲ್ಲಿ ಮೂರು ವಲಯಗಳನ್ನು ನಿರ್ಮಾಣ ಮಾಡಲಾಗಿದ್ದು ಪ್ರವಾಸಿಗರು ಹಸಿರು ವಲಯದಿಂದ 10 ಮೀಟರ್ ಅಂತರದಲ್ಲಿ ಆನೆಗಳನ್ನು ವೀಕ್ಷಿಸಬಹುದು. ಆನೆಗಳ ಜೊತೆ ಯಾವುದೇ ಇತರ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಸಂದರ್ಭ ಕುಶಾಲನಗರ ಯೋಜನಾ ಅಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್, ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್, ಉಪ ಅರಣ್ಯ ವಲಯ ಅಧಿಕಾರಿ ಕನ್ನಂಡ ರಂಜನ್, ವೆಂಕಟೇಶ್ ನಲವಡೆ, ಸಿಬ್ಬಂದಿಗಳು ಮಾವುತರು ಕಾವಡಿಗರು, ದುಬಾರೆ ರಾಪ್ಟಿಂಗ್ ಅಸೋಸಿಯೇಷನ್, ಸಲಹೆಗಾರ ಕೆ. ಎಸ್. ರತೀಶ್, ಪ್ರಮುಖರಾದ ನಂಗಾರು ಜಗ, ವಸಂತ್, ರಾಜೇಶ್, ವಿಜು ಚೆಂಗಪ್ಪ ಪ್ರಮುಖರಾದ ಅಪ್ಪು ಸುನಿತಾ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!