ಸೋಮವಾರಪೇಟೆ, ಜ 24: ಏಳು ದಶಕಗಳ ನಿರಂತರ ಅಧ್ಯಯನ,ಸಂಶೋಧನೆ ಹಾಗೂ ಬರಹಗಳ ಮೂಲಕ ಕನ್ನಡ ಭಾಷೆಗೆ ಜಾಗತಿಕ ಮನ್ನಣೆ ತಂದು ಕೊಟ್ಟ ವಿಶ್ವ ಕವಿ ಡಾ.ಕುವೆಂಪು ಕನ್ನಡ ಸಾಹಿತ್ಯ ಮರೆಯಲಾರದ ಮಾಣಿಕ್ಯ ಎಂದು ರಾಜ್ಯ ಒಕ್ಕಲಿಗ ಸಮಾಜದ ಕೊಡಗು ಜಿಲ್ಲಾ ನಿರ್ದೇಶಕರೂ ಆದ ಸಮಾಜ ಸೇವಕ ಹರಪಳ್ಳಿ ರವೀಂದ್ರ ಶ್ಲಾಘಿಸಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ತೋಳೂರು ಶೆಟ್ಟಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿನಿಯರ ವಸತಿ ಶಾಲೆಯ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ” ರಾಷ್ಟ್ರಕವಿ ಕುವೆಂಪು – ವಿಚಾರಧಾರೆ ” ಗಳ ಕುರಿತಾದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಕುವೆಂಪು ಅವರು ತಮ್ಮ ಜೀವನದುದ್ದಕ್ಕೂ ಪರಿಸರ, ಪ್ರಾಣಿ – ಪಕ್ಷಿ, ಗಿಡ – ಮರಗಳನ್ನು ಒಡಗೂಡಿದ ಪ್ರಕೃತಿಯನ್ನು ಆರಾಧಿಸಿದರು.
ಪರಿಸರ ಪ್ರಕೃತಿ ಸಂರಕ್ಷಣೆಯ ಮಹತ್ವ ಸಾರಿದರು.
ಆ ಮೂಲಕ ಗುಡಿ ಗೋಪುರ ಮಸೀದಿ ಮಂದಿರಗಳನ್ನು ಬಿಟ್ಟು ಹೊರ ಬನ್ನಿ ಎಂದು ಸಾರಿದ ಮಹಾಮಹಿಮ ಎಂದರು.
ಯಡೂರು ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯೂ ಆದ ಸೋಮವಾರಪೇಟೆ ಸಾಹಿತಿ ಎಲ್.ಎಂ.ಪ್ರೇಮ ಮಾತನಾಡಿ,
ಜಾತಿ,ಮತ- ಪಂಥಗಳ ಬೇಲಿಯನ್ನು ದಾಟಿ ನಿಜವಾದ ಮನುಷ್ಯರಾಗುವ ಜೀವನದ ಪಾಠವನ್ನು ಕಲಿಸಿದ ಯುಗದ ಕವಿ ಸಾಹಿತ್ಯ ಸೇವೆಯ ತಪಸ್ವಿ ಕುವೆಂಪು ಕರುನಾಡಿನ ಮಹಾ ಜ್ಯೋತಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಬೆಳಕು ಮೂಡಿಸಿದವರು.
ಬರೆದಂತೆ ಬದುಕಿದ ಜ್ಞಾನದ ಶಿಖರವೇರಿದ ಕನ್ನಡ ನೆಲದ ಮಹಾ ತಪಸ್ವಿ ಡಾ.ಕುವೆಂಪು ದೇಶಕ್ಕೆ ಹೆಮ್ಮೆ ಎಂದರು.
ಗಡಿ ನಾಡು ಕೊಡಗು ಜಿಲ್ಲೆಯಲ್ಲಿ ಪರಭಾಷೆಗಳ ಅಟ್ಟಹಾಸಕ್ಕೆ ಆಸ್ಪದ ನೀಡದೇ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುತ್ತಿರುವ ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ನಿತ್ಯವೂ ಸ್ಪೂರ್ತಿಯ ಸೆಲೆಯಾಗಿದ್ದಾರೆ ಎಂದು ಪ್ರೇಮ ಹೇಳಿದರು.
ಬ್ರಟಿಷ್ ಕವಿ ಜೇಮ್ಸ್ ಕಸಿನ್ಸ್ ಎಂಬವರು ಅಂದು ಕುವೆಂಪು ಅವರ ಸಾಹಿತ್ಯ ಸೇವೆಯನ್ನು ಶ್ಲಾಘಿಸದೇ ಇದ್ದಿದ್ದಲ್ಲಿ ಇವತ್ತು ಕನ್ನಡ ನಾಡು ಇಂತಹ ಶ್ರೇಷ್ಠ ಕವಿಯನ್ನು ಕಾಣುತ್ತಿರಲಿಲ್ಲ ಎಂದು ಹೆಮ್ಮೆ ವ್ಯಕ್ತ ಪಡಿಸಿದರು.
ಡಾ.ಅಂಬೇಡ್ಕರ್ ವಸತಿ ಶಾಲಾ ಪ್ರಾಂಶುಪಾಲ ಚಂದ್ರಶೇಖರ ರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡು ಕಂಡ ದಾರ್ಶನಿಕ, ತತ್ವಜ್ಞಾನಿ ಡಾ.ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ ಸ್ಮರಣೆ ಕನ್ನಡ ನಾಡಿನಲ್ಲಿ ನಿತ್ಯವೂ ನಡೆಯಬೇಕು ಎಂದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿದರು.
ಶಿಕ್ಷಕರಾದ ಕೀರ್ತಿ, ಪೂಜಾ, ಅರ್ಪಿತಾ, ರಮ್ಯಾ ಮೊದಲಾದವರಿದ್ದರು.
ಇದೇ ಸಂದರ್ಭ ಕುವೆಂಪು ರಚಿತ ಹಾಡುಗಳಿಗೆ ಶಾಲಾ ವಿದ್ಯಾರ್ಥಿನಿಯರಿಂದ ವೈವಿಧ್ಯಮಯ ನೃತ್ಯ ಪ್ರಾಕಾರಗಳು ನಡೆದವು.
ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶಾಲಾ ವಿದ್ಯಾರ್ಥಿನಿ ಪುಣ್ಯ ಆಚಾರ್ ಅವರನ್ನು ಸನ್ಮಾನಿಸಲಾಯಿತು.
ಶಾಲಾ ಶಿಕ್ಷಕಿ ಶಭಾನಾ ಸ್ವಾಗತಿಸಿ ನಿರೂಪಿಸಿದರು.
ಪುಷ್ಪಲತಾ ವಂದಿಸಿದರು.
Back to top button
error: Content is protected !!