ಮಡಿಕೇರಿ, ನ 30: ಕೊಡಗು ಜಿಲ್ಲೆಯ ಅರೆಸೇನಾಪಡೆ ನಿವೃತ್ತ ಯೋಧರ ಒಕ್ಕೂಟದ ವಾರ್ಷಿಕ ಮಹಾಸಭೆ ಮಡಿಕೇರಿಯ ಪೊಲೀಸ್ ಮೈತ್ರಿಭವನದಲ್ಲಿ ಒಕ್ಕೂಟದ ಅಧ್ಯಕ್ಷರಾದ ಎಂ.ಜಿ.ಯತೀಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಅರೆಸೇನಾಪಡೆಯ ಹಾಲೀ ಹಾಗು ಮಾಜಿ ಯೋಧರು ಕಡ್ಡಾಯವಾಗಿ ಒಕ್ಕೂಟದ ಸದಸ್ಯತ್ವ ಪಡೆದುಕೊಳ್ಳಬೇಕು. ಇದೂವರೆಗೂ ಆಳ್ವಿಕೆ ನಡೆಸಿರುವ ಸರ್ಕಾರಗಳು ಅರೆಸೇನಾಪಡೆಯಲ್ಲಿ ಸೇವೆಗೈದು ನಿವೃತ್ತಿಯಾಗಿರುವ ಯೋಧರಿಗೆ ಸರ್ಕಾರದ ಸವಲತ್ತುಗಳನ್ನು ಒದಗಿಸುವಲ್ಲಿ ಮೀನಾ ಮೇಷ ಎಣಿಸುತ್ತಿದ್ದು, ಒಕ್ಕೂಟದ ವತಿಯಿಂದ ಜಿಲ್ಲೆಯಲ್ಲಿ ಬೃಹತ್ ಹೋರಾಟ ನಡೆಸಬೇಕಾಗಿದೆ
ಎಂದು ಅಧ್ಯಕ್ಷರು ಸಂಘದ ಸದಸ್ಯರಿಗೆ ಕರೆಕೊಟ್ಟರು.
ಒಕ್ಕೂಟದ ಉಪಾಧ್ಯಕ್ಷ ರಾದ ಪುಲಿಯಂಡ ಎಂ.ಚೆಂಗಪ್ಪ ಮಾತನಾಡಿ, ಕ್ಯಾಂಟೀನ್ ಸೌಲಭ್ಯ, ಹಾಗೂ ವೀರಯೋಧರ ಸ್ಮಾರಕ ಭವನ ಜಿಲ್ಲೆಯಲ್ಲಿ ಇಲ್ಲದ ಕಾರಣ ಸರ್ಕಾರ ಯೋಧರ ನೆರವಿಗೆ ನಿಲ್ಲಬೇಕು.
ಹಾಗೆಯೇ ಕೊಡಗು ಜಿಲ್ಲೆಯಲ್ಲಿ ಇದೂವರೆಗೂ ಎಲ್ಲಿಯೂ ಅರೆಸೇನಾಪಡೆಯ ಸೈನಿಕ ಸ್ಮಾರಕ ಭವನ ಇಲ್ಲದ ಕಾರಣ ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ ಗ್ರಾಮದ ಸರ್ವೆ ನಂಬರ್ 11/1 ರಲ್ಲಿ ಸುಮಾರು 60 ಸೆಂಟು ಖಾಲಿ ಜಾಗವಿದ್ದು ಈ ಜಾಗವನ್ನು ಯೋಧರ ಸಂಘಕ್ಕೆ ನೋಂದಣಿ ಮಾಡಿಕೊಡುವ ಮೂಲಕ ಅಗತ್ಯ ಅನುದಾನದೊಂದಿಗೆ ಸಕಲ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿದರು.
ಒಕ್ಕೂಟದ ನಿರ್ದೇಶಕರಾದ ಜಿ.ಕೆ.ದಿನೇಶ್ ಕುಮಾರ್ ಮಾತನಾಡಿ, ಕುಶಾಲನಗರ ತಾಲ್ಲೂಕಿನ ಗೊಂದಿಬಸವನಹಳ್ಳಿ ಗ್ರಾಮದ ಸರ್ವೆ ನಂಬರ್ 18/4 ಹಾಗೂ 19/1 ರಲ್ಲಿ ಸುಮಾರು 5 ಎಕರೆ ಸರ್ಕಾರಿ ಜಾಗವಿದ್ದು ಈ ಜಾಗದಲ್ಲಿ ನಿವೃತ್ತ ಯೋಧರಿಗೆ ಮನೆಗಳನ್ನು ಕಟ್ಟಲು 60/40 ಅಳತೆಯ ನಿವೇಶನಗಳಾಗಿ ಮಾರ್ಪಡಿಸಿ ಯೋಧರಿಗೆ ಒದಗಿಸಬೇಕು.
ಈಗಾಗಲೇ ಈ ಜಾಗ ಒತ್ತುವರಿಯಾಗಿದ್ದು ಇದನ್ನು ತೆರವುಗೊಳಿಸಿ
ಸೈನಿಕರ ಒಕ್ಕೂಟಕ್ಕೆ ಕೊಡಬೇಕೆಂದು ಆಗ್ರಹಿಸಿ ಈಗಾಗಲೇ ಕಂದಾಯ ಸಚಿವರೂ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಒಕ್ಕೂಟದ ಸಂಚಾಲಕರಾದ ನೂರೇರಾ ಎಂ.ಭೀಮಯ್ಯ ಮಾತನಾಡಿ, ಜಿಲ್ಲೆಯ ಐದು ತಾಲ್ಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಜಾಗವಿದ್ದು ಉಳ್ಳವರ ಪಾಲಾಗಿದೆ.
ಅಂತಹ ಭೂಮಿಯನ್ನು ತೆರವು ಗೊಳಿಸಿ 60/40 ಅಳತೆಯ ನಿವೇಶನ ಗಳನ್ನಾಗಿ ಪರಿವರ್ತಿಸಿ ಮಾಜಿ ಯೋಧರಿಗೆ ನೀಡಬೇಕೆಂದು ಆಗ್ರಹಿಸಿದರು.
ಜೀವದ ಹಂಗು ತೊರೆದು ದೇಶದ ರಕ್ಷಣೆಗೈದ ನಿವೃತ್ತ ಯೋಧರು ಹಾಗೂ ಅವಲಂಬಿತ ಕುಟುಂಬ ಸದಸ್ಯರು ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ. ಹಾಗಾಗಿ ಮುಂಬರುವ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಮಾಜಿ ಯೋಧರಿಗೆ ಟಿಕೇಟ್ ನೀಡಬೇಕೆಂದು ರಾಜಕೀಯ ಪಕ್ಷಗಳನ್ನು ನಿರ್ದೇಶಕ ರೂ ಆದ ನಿವೃತ್ತ ಯೋಧ ಹರೀಶ್ ಗೌಡ ಕೋರಿದರು.
ಮಹಾಸಭೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ಬಿ.ಎಂ.ರವೀಂದ್ರ, ಸಹ ಕಾರ್ಯದರ್ಶಿ ಬಿ.ಎನ್.ರಾಜಶೇಖರ, ನಿರ್ದೇಶಕರಾದ ನಳಿನಿಕುಮಾರಿ, ಅಪ್ಪಯ್ಯ, ಮನೋಹರ, ಎಂ.ಎನ್. ಗೋಪಾಲಕೃಷ್ಣ, ಧನಂಜಯ, ಸುರೇಶ್, ಡಬ್ಲೂ.ಎಂ.ಪೂಣಚ್ಚ, ಎ.ಸಿ.ಅಶೋಕ್, ನಂಜಪ್ಪ, ಕೆ.ಎಂ. ಪುಷ್ಪರಾಜು ಮೊದಲಾದವರಿದ್ದರು.
ಮಹಾಸಭೆಯಲ್ಲಿ ವೀರಯೋಧರ ಕುಟುಂಬದ ವೀರನಾರಿಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.
ಒಕ್ಕೂಟದ ನಿರ್ದೇಶಕಿ ಕೆ.ಜಿ.ಗಂಗಮ್ಮ ಸ್ವಾಗತಿಸಿ ವಂದಿಸಿದರು.
Back to top button
error: Content is protected !!