ಸಭೆ

ಅಳುವಾರದಲ್ಲಿ ತೊರೆನೂರು ಗ್ರಾಮ ಪಂಚಾಯತ್ ನ ಗ್ರಾಮಸಭೆ

ಕುಶಾಲನಗರ, ಅ 11: ತೊರೆನೂರು ಗ್ರಾಮಪಂಚಾಯತ್ ನ ಗ್ರಾಮಸಭೆ ಅಳುವಾರದ ಸಮುದಾಯ ಭವನದಲ್ಲಿ ಗ್ರಾಪಂ ಅಧ್ಯಕ್ಷೆ ಶೋಭಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ನೋಡಲ್ ಅಧಿಕಾರಿಯಾಗಿ ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ‌ ಕಾಳನಾಯಕ ಪಾಲ್ಗೊಂಡಿದ್ದರು. ಕೆಲವು ಪ್ರಮುಖ ಇಲಾಖೆ ಅಧಿಕಾರಿಗಳ ಗೈರುಹಾಜರಿ ಬಗ್ಗೆ ಆಕ್ರೋಶ ವ್ಯಕ್ತಗೊಂಡಿತು.

ಕಳೆದ ಸಾಲಿನ ಗ್ರಾಮಸಭೆಯಲ್ಲಿ ಚರ್ಚೆಯಾದ ಸಮಸ್ಯೆಗಳ ಬಗ್ಗೆ ಮತ್ತೆ ವಿಚಾರಗಳು ಪ್ರಸ್ತಾಪಗೊಂಡಿತು. ಸಮಸ್ಯೆಗಳ‌ ನಿವಾರಣೆಗೆ ಎಷ್ಟರ ಮಟ್ಟಿಗೆ ಕ್ರಮವಹಿಸಲಾಗಿದೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು.

ಜಲಜೀವನ್ ಮಿಷನ್ ಯೋಜನೆ‌ ಅನುಷ್ಠಾನ ವಿಳಂಭವಾಗುತ್ತಿದ್ದು ಕುಡಿವ ನೀರಿನ ಸಮಸ್ಯೆ ಉಲ್ಭಣಿಸಿರುವ ಬಗ್ಗೆ ಗ್ರಾಮಸ್ಥರು ಆರೋಪಿಸಿದರು. ‌ಸಿದ್ದಲಿಂಗಪುರದ ರಂಗರಾಜು ಎಂಬ ದಂಪತಿಗಳು ಗುಂಡಿಯಿಂದ ನೀರು ತೆಗೆದು ಬಳಸುವ ಪರಿಸ್ಥಿತಿ ಇರುವ ಬಗ್ಗೆ ಗ್ರಾಮದ ರವಿ, ಕೃಷ್ಣೇಗೌಡ ಸಭೆಯಲ್ಲಿ ಆಕ್ರೋಷ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಪಂ ಉಪಾಧ್ಯಕ್ಷೆ ರೂಪಾ ಮಹೇಶ್, ಇಡೀ ಆಡಳಿತ ಮಂಡಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಬೆಟ್ಟ ಪ್ರದೇಶದ ವ್ಯಾಪ್ತಿಯಲ್ಲಿ ಇರುವ ಕಾರಣ ಹಾಗೂ ಅನುದಾನಗಳ‌ ಕೊರತೆ ಕಾರಣ ಸಮೀಪದ ಮನೆಯಿಂದ ನೀರು ಪಡೆದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಅವರ ಪರಸ್ಪರ ಹೊಂದಾಣಿಕೆ ಕೊರತೆಯಿಂದ ನೀರಿನ ಸಮಸ್ಯೆ ಮತ್ತೆ ಎದುರಾಗಿದೆ ಎಂದರು.

ಕಾಡಾನೆಗಳ ಹಾವಳಿ ಮಿತಿಮೀರಿದ್ದು ನಿಯಂತ್ರಣ‌ ಕ್ರಮ ಕೈಗೊಳ್ಳುವುದು, ಗ್ರಾಮಕ್ಕೆ ಪಶುವೈದ್ಯರ ಲಭ್ಯತೆಗೆ ಕ್ರಮ ಕೈಗೊಳ್ಳುವ ಬಗ್ಗೆ ರೈತರಿಂದ ಬೇಡಿಕೆಗಳು ವ್ಯಕ್ತಗೊಂಡಿತು. ರಸ್ತೆ, ಚರಂಡಿ ಸಮಸ್ಯೆಗಳು, ಫಲಾನುಭವಿಗಳಿಗೆ ನಿವೇಶನ ಒದಗಿಸುವ ಬಗ್ಗೆ, ಅರಣ್ಯ ಹಕ್ಕು ರಚನೆ ಬಗ್ಗೆ, ಮಳೆಹಾನಿ‌ ಪರಿಹಾರ ವಿತರಣೆ, ಸ್ಮಶಾನಕ್ಕೆ ಜಾಗ ನಿಗದಿ ಬಗ್ಗೆ ಚರ್ಚೆಗಳು ನಡೆದವು.

ಸಭೆಯಲ್ಲಿದ್ದ ವಿವಿದ ಇಲಾಖೆ ಅಧಿಕಾರಿಗಳು ಇಲಾಖೆಯ ಸೌಲಭ್ಯ ಮಾಹಿತಿಗಳನ್ನು ಗ್ರಾಮಸ್ಥರಿಗೆ ಒದಗಿಸಿದರು.

ಈ ಸಂದರ್ಭ ಗ್ರಾಪಂ ಸದಸ್ಯರಾದ ದೇವರಾಜ್, ಶಿವಕುಮಾರ, ತೀರ್ಥಾನಂದ, ಬಾಬಿಯಣ್ಣ, ಸಾವಿತ್ರಿ, ನಿಂಗಾಜಮ್ಮ, ಪಿಡಿಒ ವೀಣಾ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!