ಕುಶಾಲನಗರ, ಅ 04: ಕುಶಾಲನಗರ-ಮಡಿಕೇರಿ ಹೆದ್ದಾರಿ ಬದಿಯ ತಾವರೆಕೆರೆ ಸಮೀಪದ ಕೆಜಿಎಸ್ ಮಿಲ್ ಬಳಿ ಅಶುಚಿತ್ವ ತಾಂಡವವಾಡುತ್ತಿದೆ. ಹೆದ್ದಾರಿ ಬದಿ ಚರಂಡಿಯಲ್ಲಿ ತ್ಯಾಜ್ಯ ಮಡುಗಟ್ಟಿ ನಿಂತಿದ್ದರೂ ಕೂಡ ಸ್ವಚ್ಚತೆಗೆ ಪುರಸಭೆ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆ ನಿರಂತರವಾಗಿದ್ದು ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಕಳೆದ 7 ವರ್ಷಗಳಿಂದ ನಿರಂತರವಾಗಿ ಪುರಸಭೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಕೂಡ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಅಪೂರ್ಣ ಚರಂಡಿ ಕಾಮಗಾರಿಯಿಂದ ಚರಂಡಿ ನೀರು ಉಕ್ಕಿ ಹರಿದು ರಸ್ತೆಯ ಮೇಲೆ ಹರಿಯುತ್ತಿರುವ ಕಾರಣ ಪಾದಾಚಾರಿಗಳಿಗೂ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ತುಂಬಿ ನಿಂತ ಚರಂಡಿಯ ದುರ್ವಾಸನೆ, ನೊಣ, ಸೊಳ್ಳೆಗಳ ಕಾಟದಿಂದ ಸಮೀಪದ ಅಂಗಡಿ ಮಳಿಗೆಗಳು, ಉದ್ಯಮಗಳಿಗೆ, ನಿವಾಸಿಗಳಿಗೆ ಸಾಂಕ್ರಾಮಿಕ ರೋಗಗಳು ಬಾಧಿಸುತ್ತಿವೆ. ಪರಿಸ್ಥಿತಿ ಬಿಗಡಾಯಿಸುವ ಮುನ್ನ ಚರಂಡಿ ಸ್ವಚ್ಚತೆಗೆ ಸಂಬಂಧಿಸಿದವರು ಗಮನಹರಿಸಬೇಕಿದೆ ಎಂದು ಸ್ಥಳೀಯ ಉದ್ಯಮಿ ಸುಮೇರ್ ಮತ್ತಿತರರು ಆಗ್ರಹಿಸಿದ್ದಾರೆ.
Back to top button
error: Content is protected !!