ಸಭೆ

ಕುಶಾಲನಗರ ಪುರಸಭೆ ಬಜೆಟ್ ಪೂರ್ವ ಭಾವಿ ಸಭೆ

ಕುಶಾಲನಗರ, ಜ 29 : ಇಲ್ಲಿನ ಪುರಸಭೆಯ 2026 – 27 ನೇ ಸಾಲಿನ ಬಜೆಟ್ ಮಂಡನೆಯ ಪೂರ್ವಭಾವಿ ಸಿದ್ದತಾ ಸಭೆ ಪುರಸಭೆಯ ಆಡಳಿತಾಧಿಕಾರಿಗಳೂ ಆದ ಕೊಡಗು ಜಿಲ್ಲೆಯ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಅಧ್ಯಕ್ಷತೆ ಯಲ್ಲಿ ಗುರುವಾರ ಪುರಸಭೆ ಸಭಾಂಗಣದಲ್ಲಿ ನಡೆಯಿತು.
ನಗರದಲ್ಲಿ ಹೆಚ್ಚಿನ ಶಾಲಾ ಕಾಲೇಜುಗಳು ಇರುವುದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನ ವಾಗುವಂತೆ ಅತ್ಯಾಧುನಿಕ ಶೈಲಿಯ ಗ್ರಂಥಾಲಯ ನಿರ್ಮಾಣ ಮಾಡುವಂತೆ ಆಡಳಿತಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ನಿತಿನ್ ಮುಖ್ಯಾಧಿಕಾರಿ ಗೆ ಸಲಹೆ ನೀಡಿದರು.
ಹಿರಿಯ ನಾಗರೀಕರು ಒಳಗೊಂಡಂತೆ ಸಾರ್ವಜನಿಕರಿಗೆ ಉಪಯೋಗುವ ಗ್ರಂಥಗಳು, ದಿನಪತ್ರಿಕೆಗಳನ್ನು ವಾಚಿಸುವಂತಹ ವಾತಾವರಣ ನಿರ್ಮಾಣ ಮಾಡಬೇಕು.
ಹಾಗೆಯೇ ಪೂರಕವಾದ ಶೌಚಾಲಯ, ಕುಡಿವ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಅವರು ನಿರ್ದೇಶನ ನೀಡಿದರು.
ಮುಖ್ಯಮಂತ್ರಿಗಳ ಮೂಲಭೂತ ಸೌಕರ್ಯ ಯೋಜನೆಯಡಿ 550 ಲಕ್ಷ ರೂಗಳ ಅನುದಾನ ಪುರಸಭೆಗೆ ಬಿಡುಗಡೆಗೊಳ್ಳಲಿದೆ.
ಹಾಗೆಯೇ ಡೆಲ್ಟ್ ಯೋಜನೆಯಡಿ 5.50 ಕೋಟಿ ರೂಗಳ ಅನುದಾನ ಬಿಡುಗಡೆಗೊಂಡಿದ್ದು, ಈ ಅನುದಾನದಲ್ಲಿ ಕೊಪ್ಪಾ ಕಾವೇರಿ ಸೇತುವೆಯಿಂದ ತಾವರೆ ಕೆರೆ ವರೆಗೆ ಹಾಗೂ ಎಪಿಸಿಎಂಎಸ್ ಬಳಿಯ ಮಸೀದಿಯಿಂದ ಐಬಿ ವರೆಗೂ ಹೆದ್ದಾರಿಯ ಎರಡೂ ಬದಿ ಅಗತ್ಯ ಚರಂಡಿ, ಪುಟ್ ಬಾತ್, ವಿದ್ಯುದೀಕರಣ ಮಾಡಲಾಗುತ್ತದೆ.
ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ಮೇಲು ಸೇತುವೆ ನಿರ್ಮಾಣ, ಮುಖ್ಯ ವೃತ್ತಗಳಲ್ಲಿ ಹೈ ಮಾಸ್ಕ್ ಲೈಟುಗಳ ಅಳವಡಿಕೆ, ವಿದ್ಯುತ್ ಚಿತಾಗಾರ, ವೆಂಕಟೇಶ್ವರ ಚಿತ್ರಮಂದಿರದ ಜಾಗ ಹಾಗೂ ಕಾವೇರಿ ಬಡಾವಣೆಯಲ್ಲಿ ವಾಣಿಜ್ಯ ಸಂಕೀರ್ಣ, ಪ್ರತೀ ವಾರ್ಡುಗಳಲ್ಲಿ ಶುದ್ಧ ಕುಡಿವ ನೀರಿನ ಘಟಕ ನಿರ್ಮಾಣದ ಗುರಿ ಹೊಂದಲಾಗಿದೆ.
ಈಗಾಗಲೇ 2026-27 ನೇ ಸಾಲಿನಲ್ಲಿ 2361 ಲಕ್ಷ ರೂಗಳ ಆದಾಯ ನಿರೀಕ್ಷಿಸಲಾಗಿದ್ದು, 2084..40 ಲಕ್ಷ ರೂಗಳ ವೆಚ್ಚದ ಪಟ್ಟಿ ಸಿದ್ದಪಡಿಸಲಾಗಿದೆ. ನಗರದ
ಸಾರ್ವಜನಿಕರ ಸಲಹೆಗಳನ್ನು ಸ್ವೀಕರಿಸಿ ಆಯ್ದ ಅಭಿವೃದ್ದಿ ಗಳನ್ನು ಬಜೆಟ್ ನಲ್ಲಿ ಸೇರಿಸಲಾಗುತ್ತದೆ ಎಂದು ಮುಖ್ಯಾಧಿಕಾರಿ ಗಿರೀಶ್ ಕುಮಾರ್ ಹೇಳಿದರು.
ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿನ ಆರು ಎಕರೆ ವಿಸ್ತಾರವಾದ ಭೂಪ್ರದೇಶವನ್ನು ಅನ್ಯ ಉದ್ದೇಶಗಳಿಗೆ ಬಳಸದೇ ಕುಶಾಲನಗರದ ಸಾರ್ವಜನಿಕ ಬಳಕೆಯ ದೃಷ್ಟಿಯಿಂದ ಮೀಸಲಿರಿಸಿ ಸುತ್ತಲೂ ಫೆನ್ಸಿಂಗ್ ಅಳವಡಿಸಿ ಸಂರಕ್ಷಣೆ ಮಾಡಬೇಕು ಎಂದು ಕುಡಾ ಮಾಜಿ ಅಧ್ಯಕ್ಷ ಎಂ.ಎಂ.ಚರಣ್ ಹೇಳಿದರು.
ಬೆಳೆಯುತ್ತಿರುವ ಕುಶಾಲನಗರದಲ್ಲಿ ಹೆದ್ದಾರಿಯ ಉದ್ದಕ್ಕೂ ವೈಜ್ಞಾನಿಕ ವಾಗಿ ವಿದ್ಯುದೀಕರಣಗೊಳಿಸಬೇಕು. ನಗರದ ಹಿತದೃಷ್ಟಿಯಿಂದ ವಾಕ್ಯೂಮ್ ಕ್ಲೀನರ್ ಟ್ರಕ್ ಖರೀದಿಸಲು ಕ್ರಮ ಕೈಗೊಳ್ಳಬೇಕು ಎಂದು ಮಾಹಿತಿ ನೀಡಿದರು.
ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕ ವಾಗಿ ಬೆಳೆಯುತ್ತಿರುವ ಕುಶಾಲನಗರದಲ್ಲಿ ಆಯ್ದ ಕಡೆ ವೃತ್ತಗಳನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡಬೇಕು ಎಂದು ಪುರಸಭೆ ಮಾಜಿ ಸದಸ್ಯ ಆನಂದಕುಮಾರ್ ಸಲಹೆ ನೀಡಿದರು.
ಕುಶಾಲನಗರದ ಬಸವೇಶ್ವರ ಬಡಾವಣೆ, ಗೊಂದಿಬಸವನಹಳ್ಳಿ ವ್ಯಾಪ್ತಿಯ ರಸ್ತೆಗಳಿಗೆ ವಿಶೇಷ ಅನುದಾನ ಮೀಸಲಿಡಬೇಕು ಎಂದು ನಾಮನಿರ್ದೇಶಿತ ಸದಸ್ಯ ಜಿ.ಬಿ.ಜಗದೀಶ್ ಹೇಳಿದರು.
ಶ್ರದ್ದಾಂಜಲಿ ವಾಹನದ ಮಾದರಿಯಲ್ಲಿ ಸಾರ್ವಜನಿಕವಾಗಿ ಅನುಕೂಲವಾಗುವಂತೆ ಮಿನಿ ಜೆಸಿಬಿ ಖರೀದಿಗೆ ಅನುದಾನ ಮೀಸಲಿಡಬೇಕು. ಪೂನಂ ಬಡಾವಣೆಯಿಂದ ಗುಂಡೂರಾವ್ ಬಡಾವಣೆಗೆ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿ ಗೊಳಿಸಬೇಕೆಂದು ಮಾಜಿ ಸದಸ್ಯ ಡಿ.ಕೆ. ತಿಮ್ಮಪ್ಪ ಹೇಳಿದರು.
ನಗರದಲ್ಲಿರುವ ಉದ್ಯಾನವನಗಳನ್ನು ಸಮಗ್ರವಾಗಿ ಅಭಿವೃದ್ಧಿ ಗೊಳಿಸಿ ಹಿರಿಯ ನಾಗರಿಕರಿಗೆ, ಮಹಿಳೆಯರು ಹಾಗೂ ಮಕ್ಕಳಿಗೆ ಅನುವು ಮಾಡಿಕೊಡಬೇಕು.
ಕಾವೇರಿ ಬಡಾವಣೆಯ ಉದ್ಯಾನವನ್ನು ಅಭಿವೃದ್ಧಿ ಗೊಳಿಸಬೇಕೆಂದು ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್.ಮೂರ್ತಿ ಒತ್ತಾಯಿಸಿದರು.
ನಗರದ ವ್ಯಾಪ್ತಿಯಲ್ಲಿ ಕಂಡ ಕಂಡಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಕಡಿವಾಣ ಹಾಕಬೇಕು. ಆಯ್ದ ಕಡೆ ಜಾಗ ಗುರುತಿಸಬೇಕು.
ಮಾಂಸದ ಅಂಗಡಿಗಳನ್ನು ಕೂಡ ಪ್ರತ್ಯೇಕ ಸ್ಥಳದಲ್ಲಿ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಕೆ.ಜಿ.ಮನು ಆಗ್ರಹಿಸಿದರು.
ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮುಖ್ಯಾಧಿಕಾರಿ ಗಿರೀಶ್ ಕುಮಾರ್ ಇದ್ದರು.
ಸಭೆಯಲ್ಲಿ ಮಾಜಿ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!