ಕಾಮಗಾರಿ
ಕುಶಾಲನಗರ PACS ಶತಮಾನೋತ್ಸವ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ
ರೂ 16.5 ಕೋಟಿ ವೆಚ್ಚದಲ್ಲಿ ಗುಡ್ಡೆಹೊಸೂರು ಬಳಿ ನಿರ್ಮಾಣಗೊಳ್ಳಲಿದೆ ಭವ್ಯ ಭವನ
ಕುಶಾಲನಗರ, ಆ 14 : ಕುಶಾಲನಗರದ ನಂ 122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವದ ಅಂಗವಾಗಿ ಗುಡ್ಡೆಹೊಸೂರು ಬಳಿಯ ಗುಡ್ಡೆಹೊಸೂರು ಬಳಿ ರೂ.16.5 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶತಮಾನೋತ್ಸವ ಭವನಕ್ಕೆ ಬುಧವಾರ ಭೂಮಿಪೂಜೆ ನೆರವೇರಿಸಲಾಯಿತು.
ವಿರಾಜಪೇಟೆ ಕ್ಷೇತ್ರದ ಶಾಸಕರು ಆದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಪ್ಪ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕೊಡಗಿನ ಸಹಕಾರ ಸಂಘಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿವೆ.
ಸಹಕಾರಿ ಸಂಘಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ಸಹಕಾರ ಸಂಘಕ್ಕೆ ತನ್ನದೇ ಆದ ಜವಾಬ್ದಾರಿ ಇದೆ. ಸಹಕಾರ ಕ್ಷೇತ್ರದಲ್ಲಿ ಸರ್ಕಾರ ಹಾಗೂ ಅಧಿಕಾರಿ ವರ್ಗ ಹಸ್ತಕ್ಷೇಪ ಮಾಡಲು ಬರಲ್ಲ.ಜನರೇ ಸೇರಿ ಜನರಿಂದ ಸ್ಥಾಪನೆಗೊಂಡ ಸಹಕಾರ ಸಂಘ ರೈತರ ಏಳಿಗೆಯ ಉದ್ದೇಶ ಹೊಂದಿದೆ.
ರೈತರಿಗೆ ಸಾಲಸೌಲಭ್ಯ ಕೊಡುವುದರ ಜೊತೆಗೆ ಅವರ ಸಮಸ್ಯೆ ಗಳಿಗೆ ಸ್ಪಂದಿಸುವಂತೆ ಆಗಬೇಕು ಎಂದರು.
ಕುಶಾಲನಗರ ಸಂಘದ ಶರವಣಕುಮಾರ್ ನೇತೃತ್ವದಲ್ಲಿ ಎಲ್ಲ ನಿರ್ದೇಶಕರು ಒಟ್ಟಾಗಿ ಉತ್ತಮ ಯೋಜನೆಯನ್ನು ರೂಪಿಸಿರುವುದು ಹೆಮ್ಮೆಯ ವಿಚಾರ. ಜಿಲ್ಲೆಯ ಬೇರೆ ಸಹಕಾರ ಸಂಘಗಳಿಗೆ ದೊಡ್ಡ ಮಟ್ಟದ ಆರ್ಥಿಕ ಶಕ್ತಿ ಇಲ್ಲ. ಕುಶಾಲನಗರ ಸಂಘಕ್ಕೆ ಇದೆ. ಇದೊಂದು ಅದ್ಭುತ ಕಟ್ಟಡವಾಗಿ ಹೊರಹೊಮ್ಮಲಿದೆ.ಹೆಚ್ಚಿನ ಜನರು ಒಂದೆಡೆ ಸೇರಿ ಕಾರ್ಯಕ್ರಮ ನಡೆಸಲು ತುಂಬ ಅನುಕೂಲವಾಗಲಿದೆ.ಬೇಗ ಕಟ್ಟಡ ನಿರ್ಮಾಣವಾಗಲಿ ಎಂದು ಆಶಿಸುತ್ತೇನೆ ಎಂದರು.
ಶಾಸಕ ಡಾ.ಮಂತರ್ ಗೌಡ ಅವರು ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಉದ್ದೇಶಿತ ಶತಮಾನೋತ್ಸವ ಭವನ ಕಟ್ಟಡ ವಿನ್ಯಾಸದ ತ್ರಿಡಿ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿ, ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ರೂ.16.5 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ರೂಪಿಸಿರುವುದು ಹೆಮ್ಮೆಯ ವಿಚಾರ. ಕುಶಾಲನಗರ ಸಂಘವು ಕೈಗೊಂಡಿರುವ ಯೋಜನೆಗಳನ್ನು ಜಿಲ್ಲೆಯ ಇತರೆ ಸಹಕಾರ ಸಂಘಗಳು ಮಾದರಿಯಾಗಿ ತೆಗೆದುಕೊಂಡು ಬೆಳೆವಣಿಗೆ ಹೊಂದಬೇಕು ಎಂದರು. ಈ ನೂತನ ಭವನದಿಂದ ಜಿಲ್ಲೆಯ ಜನರಿಗೆ ಅನುಕೂಲ ಉಂಟಾಗಲಿದೆ.ಭವನದ ಕಾಮಗಾರಿ ಗುಣಮಟ್ಟದಿಂದ ನಡೆದು ಬೇಗ ಕಟ್ಟಡ ನಿರ್ಮಾಣವಾಗಲಿ ಎಂದು ಹೇಳಿದರು. ಭವನ ನಿರ್ಮಾಣವಾದ ನಂತರ ಬಡವರಿಗೆ ಹಾಗೂ ಜನಸಾಮಾನ್ಯರಿಗೆ ರಿಯಾಯಿತಿ ದರದಲ್ಲಿ ಅವಕಾಶ ಮಾಡಿಕೊಡಬೇಕು. ಭವನದಲ್ಲಿ ಉತ್ತಮ ನಿರ್ವಹಣೆ ಹಾಗೂ ಸ್ವಚ್ಛತೆ ಕಾಪಾಡಬೇಕು. ಜೊತೆಗೆ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸುವ ಮೂಲಕ ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಮಾತನಾಡಿ, ಸಂಘವು ಕಳೆದ ಆರೇಳು ವರ್ಷದಿಂದ ಶತತವಾಗಿ ಕೋಟಿಗೂ ಮಿಗಿಲಾಗಿ ಲಾಭಗಳಿಸಿಕೊಂಡು ಬರುತ್ತಿದೆ. ಹಲವು ಏಳುಬೀಳುಗಳೊಂದಿಗೆ ಅಭಿವೃದ್ಧಿ ಕಂಡಿರುವ ಸಂಘವು ಕಳೆದ ಎರಡು ವರ್ಷ ಗಳ ಹಿಂದೆ ಅದ್ದೂರಿಯಾಗಿ ಶತಮಾನೋತ್ಸವ ಆಚರಣೆ ಮಾಡಲಾಯಿತು. ಶತಮಾನೋತ್ಸವ ಸವಿನೆನಪಿಗಾಗಿ ಗುಡ್ಡೆಹೊಸೂರು ಬಳಿ 1.80 ಎಕರೆ ಜಾಗ ಖರೀದಿಸಿದ್ದೇವೆ.ಈ ಜಾಗದಲ್ಲಿ ರೂ.16.5 ಕೋಟಿ ವೆಚ್ಚದ ಆಧುನಿಕ ಸೌಲಭ್ಯ ಹೊಂದಿರುವ ಶತಮಾನೋತ್ಸವ ಭವನ ನಿರ್ಮಾಣ ಮಾಡಲಾಗುತ್ತಿದೆ.ಈ ಭವನ ಜಿಲ್ಲೆಯಲ್ಲಿ ಇತಿಹಾಸ ನಿರ್ಮಾಣ ಮಾಡಲಿದೆ ಎಂದು ಹೇಳಿದರು.
ಕಟ್ಟಡ ನಿರ್ಮಾಣ ಸಮಿತಿ ಸಲಹೆಗಾರ ವಿ.ಪಿ.ಶಶಿಧರ್ ಮಾತನಾಡಿ, ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೈಗೊಂಡಿರುವ ಈ ಯೋಜನೆ ಜಿಲ್ಲೆಯ ಇತರೆ ಸಂಘಗಳಿಗೆ ಮಾದರಿಯಾಗಿದೆ.ಕುಶಾಲನಗರ ತಾಲ್ಲೂಕಿನ ಇತಿಹಾಸದಲ್ಲಿ ಸಹಕಾರ ಸಂಘವೊಂದರೆ ಐತಿಹಾಸಿಕ ಸಾಧನೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಗುಡ್ಡೆಹೊಸೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ರುಕ್ಮಿಣಿ,ಸದಸ್ಯರಾದ ಉಷಾ,ಬಿ.ಎಂ.ಪ್ರದೀಪ್, ಜಿ.ಪಂ.ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ,ಎಪಿಸಿಎಂಎಸ್ಸಿ ಅಧ್ಯಕ್ಷ ಎಂ.ಎನ್.ಕುಮಾರಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶನಿವಾರಸಂತೆ ಶರತ್, ಮೈಸೂರು ವಿಭಾಗದ ಸಹಕಾರ ಇಲಾಖೆಯ ಉಪ ನಿಬಂಧಕ ಎಚ್.ಆರ್.ವಿಜಯಕುಮಾರ್, ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ವಿ.ಎಸ್.ಆನಂದ ಕುಮಾರ್ ನಿರ್ದೇಶಕರಾದ ಡಿ.ವಿ.ರಾಜೇಶ್, ಕವಿತಾ, ನೇತ್ರಾವತಿ,ಮಧುಸೂದನ್, ಯತೀಶ್, ಮಧುಕುಮಾರ್,ಎಂ.ಕೆ.ಗಣೇಶ್,ಅಬ್ದುಲ್ ಖಾದರ್,ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಬಿ. ಲೋಕೇಶ್ ಉಪಸ್ಥಿತರಿದ್ದರು.