ಕುಶಾಲನಗರ, ಆ 23: ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಕೊಡಗು ಜಿಲ್ಲಾ ಮತ್ತು ಪಿರಿಯಾಪಟ್ಟಣ ತಾಲ್ಲೂಕು ಘಟಕದ ಆಶ್ರಯದಲ್ಲಿ
ಆ.25 ರ ಗುರುವಾರ ಬೆಳಿಗ್ಗೆ 10 ಗಂಟೆಗೆ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ
ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕೊಡಗು ಜಿಲ್ಲಾಧ್ಯಕ್ಷ ಕೆ.ಟಿ.ಶ್ರೀನಿವಾಸ್ ತಿಳಿಸಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆಯಲ್ಲಿ ಕೊಡಗು ಹಾಗೂ ಪಿರಿಯಾಪಟ್ಟಣ ತಾಲ್ಲೂಕಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಹಲವು ಮಹನೀಯರನ್ನು ಸನ್ಮಾನಿಸಲಾಗುವುದು. ಮಡಿಕೇರಿ ಹಾಗೂ ಪಿರಿಯಾಪಟ್ಟಣ ಕ್ಷೇತ್ರ ಶಾಸಕರಾದ ಅಪ್ಪಚ್ಚುರಂಜನ್, ಕೆ.ಮಹದೇವ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಾರೆ. ಸಂಘದ ರಾಜ್ಯಾಧ್ಯಕ್ಷ ಕಲಾವಿದ ವಿಷ್ಣು ಅಧ್ಯಕ್ಷತೆ ವಹಿಸಲಿದ್ದಾರೆ.
ಅಲ್ಲದೆ ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಪರಿಸರ ದೇವತೆ ಸಾಲುಮರದ ತಿಮ್ಮಕ್ಕ ಅವರು ಪಾಲ್ಗೊಳ್ಳುತ್ತಾರೆ.
ಕೊಡಗಿನ ಪ್ರಕೃತಿ ವಿಕೋಪ ಹಾಗೂ ಕಾವೇರಿ ನದಿ ಪ್ರವಾಹದ ಸಂದರ್ಭ ಎಲೆಮರೆಯ ಕಾಯಿಯಂತೆ ಉತ್ತಮವಾಗಿ ಸಮಾಜ ಸೇವೆ ಸಲ್ಲಿಸಿದವರಿಗೆ, ಕೊರೋನ ವಾರಿಯರ್ಸ್ ಗಳಿಗೆ, ಲಾಕ್ಡೌನ್ ಸಂದರ್ಭದಲ್ಲಿಯೂ ಕೂಡ ಮನೆಯಲ್ಲಿಯೇ ಕುಳಿತು ಆನ್ ಲೈನ್ ಪಾಠ ಪ್ರವಚನ ಮೂಲಕ ಉತ್ತಮ ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್ ಇದ್ದರು.