ಕಾರ್ಯಕ್ರಮ

ಅಂಬೇಡ್ಕರ್ ವಿಚಾರಧಾರೆಗಳು ಸಮಾಜಕ್ಕೆ ದಾರಿ ದೀಪ: ಕೆ.ಎಸ್.ಮೂರ್ತಿ

ಕುಶಾಲನಗರ, ನ 19: ಸಾಮಾಜಿಕ ಅಸಮಾನತೆ ಹಾಗು ಮೇಲ್ವರ್ಗದವರ ಅಟ್ಟಹಾಸ ಮೇರೆ ಮೀರಿದ್ದ ಸಂದರ್ಭದಲ್ಲಿ ಈ ದೇಶಕ್ಕೆ ಧ್ರುವತಾರೆಯಾಗಿ ಉದಯಿಸಿದ ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನದ ಸಾಧನೆಗಳನ್ನು ಪ್ರತಿಯೊಬ್ಬರು ಅರಿಯುವ ಮೂಲಕ ಅವರಲ್ಲಿ ಹಾಸು ಹೊಕ್ಕಾಗಿದ್ದ ಶ್ರೇಷ್ಠ ಮೌಲ್ಯಗಳನ್ನು ಶಾಲಾ ಮಕ್ಕಳು ಅಳವಡಿಸಿಕೊಳ್ಳಬೇಕೆಂದು ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಕರೆ ಕೊಟ್ಟರು.
ಕೊಡಗು ಜಿಲ್ಲೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ವತಿಯಿಂದ ಹೆಬ್ಬಾಲೆಯ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ” ಡಾ.ಬಿ.ಆರ್.ಅಂಬೇಡ್ಕರ್ ಓದು ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಡಾ.ಅಂಬೇಡ್ಕರ್ ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸುಂದರವಾದ ಸಮಾನತೆಯ ಸಮಾಜವನ್ನು ಕಟ್ಟಬೇಕೆಂದು ಕೆ.ಎಸ್.ಮೂರ್ತಿ ಕರೆ ಕೊಟ್ಟರು.
ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಉಪನ್ಯಾಸ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿ ನಿರ್ದೇಶಕರೂ ಆದ ಶಿಕ್ಷಕ ಮೆ.ನಾ.ವೆಂಕಟನಾಯಕ್ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಗೆ ಸ್ಪೂರ್ತಿ ಯಾಗಬಲ್ಲ ಜಗತ್ತಿನ ಶ್ರೇಷ್ಠ ಚಿಂತಕ ಮಹಾ ಮಾನವತಾವಾದಿ ಡಾ.ಅಂಬೇಡ್ಕರ್ ಅವರ ಜೀವಿತಾವಧಿಯ ಸಾಧನೆ, ಭಾಷಣ ಹಾಗು ಹೋರಾಟಗಳನ್ನು ಅರಿಯಿರಿ.
ಕೆಳ ಜಾತಿಯ ಸಮಾಜದ ಕಟ್ಟ ಕಡೆಯ ಮಹಿಳೆ ಅಥವಾ ಪುರುಷ ಇಂದು ಉತ್ತಮ ಸ್ಥಾನಮಾನ ಹಾಗು ಅಧಿಕಾರಗಳನ್ನು ಅನುಭವಿಸುತ್ತಿದ್ದರೆ ಅದಕ್ಕೆ ಮೂಲ ಪುರುಷ ಡಾ.ಅಂಬೇಡ್ಕರ್ ಕಾರಣರು. ಅದಕ್ಕಾಗಿ ಅವರು ಬರೆದ ಭಾರತದ ಸಂವಿಧಾನವೇ ಶ್ರೇಷ್ಠ ಭಗವದ್ಗೀತೆ ಯಾಗಿದೆ.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಮಣಜೂರು ಮಂಜುನಾಥ್, ಇಲಾಖೆಯ ವತಿಯಿಂದ ಸಮಾಜದ ಶ್ರೇಷ್ಠ ಸಾಧಕರು ಹಾಗು ವೀರ ಪುರುಷರ ಸ್ಮರಣೆಗಳನ್ನು ಮಾಡುವ ಮೂಲಕ ಇಂದಿನ ಮನುಕುಲಕ್ಕೆ ಅಂತಹ ಮಹಾತ್ಮರ ಸಾಧನೆಗಳನ್ನು ಪ್ರಚಾರ ಪಡಿಸುತ್ತಿದೆ. ಹಾಗಾಗಿ ಅತ್ಯಂತ ಕಡಿಮೆ ಬೆಲೆಗೆ ಕೈಗೆಟುಕುವ
ಡಾ. ಅಂಬೇಡ್ಕರ್ ಭಾಷಣಗಳ ಪುಸ್ತಕವನ್ನು ಕೊಂಡು ಓದುವ ಮೂಲಕ ಅವರ ಸಾಧನೆಗಳನ್ನು ಅರಿಯಬೇಕೆಂದು ಕರೆಕೊಟ್ಟರು. ಮುಖ್ಯ ಅತಿಥಿಯಾಗಿದ್ದ ಹೆಬ್ವಾಲೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಣಜೂರು ಮೂರ್ತಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಸೇರಿದಂತೆ ಸಮಾಜದ ಆದರ್ಶ ಪುರುಷರ ಸಾಧನೆಗಳನ್ನು ಅರಿತು ಮಾನವೀಯತೆ ಮೈಗೂಡಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ಹೆಬ್ಬಾಲೆ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಸವರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾದಕರಾದ ಮಷಜೂರು ವಿಜಯಕುಮಾರ್, ಗೌತಮಿ, ದೃಶ್ಯ, ಶಿಕ್ಷಕರಾದ ಕವಿತಾ ಪುಟ್ಟೇಗೌಡ, ಉದಯಕುಮಾರ್, ಸಿ.ಡಿ.ಲೋಕೇಶ್, ಶ್ವೇತಾ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!