ಕುಶಾಲನಗರ, ಮಾ 27: ಜೆಡಿಎಸ್ ವರಿಷ್ಠರ ತಟಸ್ಥ ಮನೋಭಾವದಿಂದ ಕೊಡಗು ಜಿಲ್ಲೆಯ ಜೆಡಿಎಸ್ ನಾವಿಕನಿಲ್ಲದ ದೋಣಿಯಂತಾಗಿದೆ. ಈ ಹಿನ್ನಲೆಯಲ್ಲಿ ಮಾತೃ ಪಕ್ಷ ಕಾಂಗ್ರೆಸ್ ಸೇರಲಿರುವುದಾಗಿ ವಿಧಾನಸಭಾ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ತಮ್ಮ ಇಂಗಿತ ವ್ಯಕ್ತಪಡಿಸಿದರು.
ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆಗೆ ಹೆಚ್ಚಿನ ಶ್ರಮವಹಿಸಲಾಗಿತ್ತು. ಆದರೆ ರಾಜ್ಯ ನಾಯಕರಿಂದ ಸೂಕ್ತ ಸ್ಪಂದನೆ, ಸಹಕಾರದ ಕೊರತೆಯಿಂದ ಕಳೆದ ಚುನಾವಣೆಯಲ್ಲಿ ಹಿನ್ನಡೆ ಉಂಟಾಯಿತು. ಸಂಘಟನೆಗೆ ಪೂರಕವಾಗಿ ನಮಗೆ ಯಾವುದೇ ಬೆಂಬಲ ದೊರಕಲಿಲ್ಲ. ಈ ಹಿನ್ನಲೆಯಲ್ಲಿ ನಿಂತ ನೀರಾಗದೆ ಒಂದು ದಾರಿ ಹಿಡಿಯುವ ಅನಿವಾರ್ಯ ಎದುರಾಗಿದೆ.
ಹಿತೈಷಿಗಳು, ಬೆಂಬಲಿಗರ ಇಚ್ಚೆಯಂತೆ, ಜಾತ್ಯಾತೀತ ನಿಲುವು ಹೊಂದಿರುವ ಕಾರಣ ಮತ್ತೆ ಕಾಂಗ್ರೆಸ್ ಸೇರುವ ಚಿಂತನೆ ಹರಿಸಲಾಗಿದೆ. ಈ ಹಿಂದೆ ಕಾಂಗ್ರೆಸ್ ಮುಖಂಡರ ಜೊತೆಗಿನ ಒಡನಾಟ, ವಿಶ್ವಾಸ ಈಗಲು ಮುಂದುವರೆದಿದ್ದು ಶೀಘ್ರದಲ್ಲೇ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಲಿರುವುದಾಗಿ ಅವರು ತಿಳಿಸಿದರು.
ಈ ಬಾರಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ತೀವ್ರ ಸ್ಪರ್ಧೆ ಏರ್ಪಡಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭ ಬೆಂಬಲಿಗರಾದ ಅಜ್ಜಳ್ಳಿ ರವಿ, ಸರ್ಕಲ್ ಮಂಜು, ಕಿಶೋರ್, ತ್ರಿನೇಶ್, ಮಹದೇವ್ ಇದ್ದರು.
Back to top button
error: Content is protected !!