ಕಾಮಗಾರಿ

ಬಸವನಹಳ್ಳಿಯಲ್ಲಿ 7.5 ಕೋಟಿ ವೆಚ್ಚದಲ್ಲಿ ಸಾರಿಗೆ‌ಇಲಾಖೆ ನೂತನ ಡಿಪೋ ಕಾಮಗಾರಿಗೆ ಚಾಲನೆ

ಕುಶಾಲನಗರ, ಮಾ 07:  ಸಾರಿಗೆ ಡಿಪೋ ಸ್ಥಾಪನೆ ಮೂಲಕ ಸ್ಥಳೀಯರಿಗೆ ಹೆಚ್ಚಿನ ಅನುಕೂಲ ಒದಗಲಿದೆ, ವ್ಯಾಪಾರ ವಹಿವಾಟು ವೃದ್ದಿಸುವುದರೊಂದಿಗೆ ಉದ್ಯೋಗವಕಾಶಗಳು‌ ಕೂಡ ಹೆಚ್ಚಲಿವೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಹೇಳಿದರು.

ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಬಸವನಹಳ್ಳಿಯಲ್ಲಿ 7.5 ಕೋಟಿ ವೆಚ್ಚದಲ್ಲಿ ನೂತನವಾಗಿ ಸ್ಥಾಪನೆಯಾಗಲಿರುವ ಕೆಎಸ್ಆರ್ಟಿಸಿ ಡಿಪೋ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿ ಮಾತನಾಡಿದ ಅವರು, ಇರುವ ಅವಕಾಶವನ್ನು ಸದ್ಬಳಕೆ‌ ಮಾಡಿಕೊಳ್ಳುವುದಕ್ಕೆ ಮುಂದಾಗಬೇಕಿದೆ.‌ ಇರುವ ಅವಧಿಯಲ್ಲಿ ಜನಪರ ಕೆಲಸಗಳ ಮೂಲಕ ಮನೆಮಾತಾಗಬೇಕಿದೆ. ಈಗಾಗಲೆ ಹಿರಿಯರ ಶ್ರಮದಿಂದ ಡಿಪೋ ಸ್ಥಳ ಮಂಜೂರಾಗಿದ್ದ ಕಾರಣ ಅನುದಾನ ತರಲು ನನಗೆ ಸಹಕಾರಿಯಾಯಿತು. ಉದ್ಯೋಗ ಸೃಷ್ಠಿಸುವ ಸಂದರ್ಭ ಸಾರಿಗೆ ಇಲಾಖೆಯವರು ಸ್ಥಳೀಯರಿಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕಿದೆ. ಕಾಮಗಾರಿ ಸಂದರ್ಭ ಕೆಲವು ಮರಗಳಿಗೆ ಹಾನಿಯಾಗುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು ಆದಷ್ಟು ಮರಗಳನ್ಬು ಉಳಿಸಿಕೊಳ್ಖುವ ಪ್ರಯತ್ನ ಆಗಬೇಕಿದೆ. ಹಾನಿಯಾದ ಮರಗಳ ಬದಲಿಗೆ ಗಿಡ ನೆಡುವ ಯೋಜನೆಗಳನ್ನು ಈ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಿದೆ. ಭವಿಷ್ಯದ ದೃಷ್ಠಿಯಿಂದ ಡಿಪೋ ದಲ್ಲಿ ಚಾರ್ಜಿಂಗ್ ಪಾಯಿಂಟ್ ಕೂಡ ಸ್ಥಾಪಿಸಲಾಗುತ್ತಿದ್ದು, ಗ್ರೀನ್ ಡಿಪೋವಾಗಿಸುವ ಚಿಂತನೆ ಹೊಂದಲಾಗಿದೆ ಎಂದು ತಿಳಿಸಿದರು. ಎಲ್ಲೆಡೆ ನೀರಿಗೆ ಹಾಹಾಕಾರ ಎದುರಾಗಿದ್ದು

ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿ ಕೂಡ ಸಮಸ್ಯೆ ಉಲ್ಭಣಿಸಿದ್ದು ನೀರಿನ ಸಮಸ್ಯೆ‌ ನಿವಾರಿಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಉತ್ಸಾಹಿ ಶಾಸಕರು ಆಯ್ಕೆಯಾದ ಕೆಲವೇ ತಿಂಗಳಲ್ಲಿ ನೆನೆಗುದಿಗೆ ಬಿದ್ದಿದ್ದ ಡಿಪೋಗೆ ಅನುದಾನ ತಂದಿರುವುದು ಶ್ಲಾಘನೀಯ ವಿಚಾರ. ಈಗ ತಾನೆ ವಿಧಾನಸೌಧದ ಮೆಟ್ಟಿಲೇರಿರುವ ಮಂಥರ್ ಗೌಡ ಅವರ ಅಭಿವೃದ್ಧಿಪರ ಚಿಂತನೆಗಳಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ಕಾಯಕಲ್ಪ‌ ನೀಡಲು ಮುಂದಾಗಿದ್ದಾರೆ. ಇವರ ಅವಧಿಯಲ್ಲಿ ಕುಶಾಲನಗರ ತಾಲೂಕು ಸಂಪೂರ್ಣವಾಗಿ ಕಾರ್ಯಾರಂಭ ಮಾಡಲಿದೆ. ಡಿಪೋ ಮಂಜೂರಾತಿಗೆ ಹಗಲಿರುಳು ಶ್ರಮಿಸಿದವರ ಸೇವೆಯನ್ನು ಈ ಸಂದರ್ಭ ಪರಿಗಣಿಸಿ ಗೌರವ ಸಲ್ಲಿಸಿರುವುದು ಹೆಮ್ಮೆಯ ವಿಚಾರ ಎಂದರು.

ಅಭಿವೃದ್ದಿ ವಿಚಾರಗಳಲ್ಲಿ‌ ವ್ಯರ್ಥ ರಾಜಕಾರಣ ಮಾಡಬಾರದು. ಡಿಪೋ ಕಾಮಗಾರಿಯದ ಅರಣ್ಯ ಇಲಾಖೆ‌ ಕೂಡ ಅಗತ್ಯ ಸಹಕಾರ ನೀಡಬೇಕಿದೆ ಎಂದು ಆಗ್ರಹಿಸಿದರು.

ಡಿಪೋ ಸ್ಥಾಪನೆಗೆ ಶ್ರಮಿಸಿದ ವಕೀಲ ಆರ್.ಕೆ.ನಾಗೇಂದ್ರ ಬಾಬು, ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಮಾತನಾಡಿ, ಮಾಜಿ ಮುಖ್ಯಮಂತ್ರಿ ದಿ.ಗುಂಡುರಾಯರ ಕನಸು ಇಂದು ಸಾರ್ಥಕಗೊಳ್ಳುತ್ತಿದೆ.

ಈ ಹಿಂದಿನ ಆಡಳಿತಾವಧಿಯಲ್ಲಿ ಇಚ್ಚಾಶಕ್ತಿಯ ಕೊರತೆಯಿಂದಾಗಿ ಡಿಪೋ ಕಾರ್ಯಾರಂಭ ಸಾಧ್ಯವಾಗಿರಲಿಲ್ಲ. ಚುನಾಯಿತರಾದ ಆರಂಭದಲ್ಲೇ ಕೋಟ್ಯಾಂತರ ರೂಗಳ ಅನುದಾನ ತರುವುದು ಸುಲಭದ ಮಾತಲ್ಲ ಎಂದರು.

ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷೆ ರುಕ್ಮಿಣಿ ಮಾತನಾಡಿ, ನಮ್ಮ‌ ಗ್ರಾಮದಲ್ಲಿ ಡಿಪೋ ಸ್ಥಾಪನೆಯಾಗಿರುವುದು ಸಂತಸದ ವಿಚಾರ ಎಂದರು.

ಇದೇ ಸಂದರ್ಭ ಬಸವನಹಳ್ಳಿ ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.

ವೇದಿಕೆಯಲ್ಲಿ ಗುಡ್ಡೆಹೊಸೂರು ಗ್ರಾಪಂ ಉಪಾಧ್ಯಕ್ಷ ಪಟ್ಟು‌ಮಾದಪ್ಪ, ಸದಸ್ಯರಾದ ಪ್ರವೀಣ್, ಪ್ರದೀಪ್, ಸೌಮ್ಯ, ನಂದಿನಿ, ಯಶೋಧ, ರಮೇಶ, ನಾರಾಯಣ, ಶಿವಪ್ಪ, ಕೆಪಿಸಿಸಿ ಸದಸ್ಯರಾದ ಮಂಜುನಾಥ್ ಗುಂಡುರಾವ್, ನಟೇಶ್ ಗೌಡ, ಬ್ಲಾಕ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಕುಶಾಲನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮುಖಂಡರಾದ ಶಿವಶಂಕರ್, ದಿನೇಶ್, ಜೋಸೆಫ್ ವಿಕ್ಟರ್ ಸೋನ್ಸ್, ಕಿರಣ್, ಟಿ.ಪಿ.ಹಮೀದ್, ಜಗದೀಶ್, ಪಿಡಿಒ ಸುಮೇಶ್ ಸೇರಿದಂತೆ ಸಾರಿಗೆ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!