ಕುಶಾಲನಗರ, ಫೆ 21 : ಕೇಂದ್ರ ಸರ್ಕಾರದ ವಕ್ಫ್ ಬಿಲ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಕುಶಾಲನಗರ ತಾಲ್ಲೂಕು ಮುಸ್ಲಿಂ ಒಕ್ಕೂಟ ಹಾಗೂ ಸೋಮವಾರಪೇಟೆ ತಾಲೂಕು ಕೇಂದ್ರ ಸಮಿತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ತಾಲ್ಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಅಬ್ದುಲ್ ಕರೀಂ ಮಾತನಾಡಿ, ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮುಸಲ್ಮಾನರ ವಕ್ಫ್ ಆಸ್ತಿಯನ್ನು ಕಬಳಿಸುವ ಅಪಾಯಕಾರಿ ಕಾನೂನನ್ನು ಜಾರಿಗೆ ತರುತ್ತಿದ್ದು,ಇದು ಮುಸ್ಲಿಂ ವಿರೋಧಿಯಾಗಿದೆ. ಈ ತಿದ್ದುಪಡಿ ಕಾಯ್ದೆಯನ್ನು ಸಂಪೂರ್ಣ ವಿರೋಧಿಸುವುದಾಗಿ ಹೇಳಿದರು. ಅದೇ ರೀತಿ ಕೊಡಗು ವಿಶ್ವ ವಿದ್ಯಾನಿಲಯವನ್ನು ಮುಚ್ಚುವ ರಾಜ್ಯದ ನಡೆ ಖಂಡನೀಯ.ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೊಡಗು ವಿವಿ ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಸಾಮಾಜಿಕ ಕಾರ್ಯಕರ್ತ ಹನೀಫ್ ಮಾತನಾಡಿ, ನಮ್ಮ ಪೂರ್ವಿಕರು ದೇವರ ಹೆಸರಿನಲ್ಲಿ ಧಾರ್ಮಿಕ ಕಾರ್ಯಗಳಿಗೆ ದಾನ ನೀಡಿದ ವಕ್ಫ್ ಆಸ್ತಿ ಎಂದಿಗೂ ಸರಕಾರದ ಆಸ್ತಿಯಲ್ಲ. ವಕ್ಫ್ ಆಸ್ತಿ ಮೇಲೆ ಕಣ್ಣು ಹಾಕಿರುವ ಕೇಂದ್ರ ಸರಕಾರ ಮುಂದಿನ ದಿನಗಳಲ್ಲಿ ಮಂದಿರ, ಚರ್ಚ್ ಆಸ್ತಿಗಳ ಮೇಲೂ ಕಣ್ಣು ಹಾಕಲಿದೆ. ಇಂತಹ ಚಿಂತನೆಗಳನ್ನು ಹೊರತುಪಡಿಸಿ ಕೇಂದ್ರ ಹಾಗೂ ರಾಜ್ಯ ಸರಕಾರ ಶಿಕ್ಷಣಕ್ಕೆ ಒತ್ತು ನೀಡಲು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಪ್ರಮುಖರಾದ ಅಬ್ದುಲ್ ರಜಾಕ್, ಇಬ್ರಾಹಿಂ, ಆದಂ, ಉಸ್ಮಾನ್, ರಿಜ್ವಾನ್, ಸಮಿ ಮತ್ತಿತರರು ಪಾಲ್ಗೊಂಡಿದ್ದರು.
Back to top button
error: Content is protected !!