ಕುಶಾಲನಗರ, ಮಾ 05; ಕುಶಾಲನಗರದ ಫಾತಿಮ ಕಾನ್ವೆಂಟ್ ನಲ್ಲಿ 38 ವರ್ಷಗಳ ನಿರಂತರ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕಿ ಡಾಫ್ನಿ ಕೋಟ್ಸ್ ಅವರನ್ನು ಶಾಲೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ನಿವೃತ್ತ ಶಿಕ್ಷಕಿ ದಂಪತಿಗಳನ್ನು ಗೌರವ ಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ವಿದ್ಯಾರ್ಥಿಗಳಿಂದ ಪ್ರಾರ್ಥನೆ ಮತ್ತು ಸ್ವಾಗತ ನೃತ್ಯದ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಫಾತೀಮಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಸ್ಪಂದನಾ, ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವವಾದುದು. ಒಬ್ಬ ಶಿಕ್ಷಕ ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿ ಮಕ್ಕಳಿಗೆ ಭವಿಷ್ಯ ರೂಪಿಸಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ.
ಶಿಕ್ಷಕಿ ಡಾಫ್ನಿ ಅವರು ಈ ಶಾಲೆಯ ಮಕ್ಕಳಲ್ಲಿಯೆ ತಮ್ಮ ಭವಿಷ್ಯವನ್ನು ಕಂಡವರು. ಹೆಚ್ಚು ಸಮಯವನ್ನು ಶಾಲೆಗಾಗಿಯೆ ಮೀಸಲಿಟ್ಟಿದ್ದರು. ಇಂತಹ ಶಿಕ್ಷಕರು ಸಿಗುವುದು ತುಂಬಾ ಅಪರೂಪ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿವೃತ್ತಿಯ ಗೌರವ ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ಡಾಫ್ನಿ, ನಾನು ವೃತ್ತಿ ಜೀವನವನ್ನು ಪ್ರಾರಂಭಿಸಿದ್ದು. ಮಕ್ಕಳೊಂದಿಗೆ ಕಳೆದ ದಿನಗಳು, ಅವರನ್ನು ಶೈಕ್ಷಣಿಕವಾಗಿ ಸಾಮಾಜಿಕವಾಗಿ ತಿದ್ದಿ ಬೆಳೆಸಿದ ಸಾರ್ಥಕ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದು ತಮ್ಮ ಸೇವೆಯ ದಿನಗಳನ್ನು ಸ್ಮರಿಸಿಕೊಂಡರು. ವಿದ್ಯಾರ್ಥಿಗಳು ನನ್ನ ಮೇಲೆ ತೋರಿದ ಪ್ರೀತಿ ವೃತ್ತಿಯನ್ನು ಪ್ರೀತಿಸುವಂತೆ ಮಾಡಿತು. 38 ವರ್ಷಗಳ ನನ್ನ ವೃತ್ತಿ ಜೀವನ ಅವಿಸ್ಮರಣೀಯ ಬುತ್ತಿಗಂಟಾಗಿದ್ದು ಮುಂದಿನ ಸಂತಸದ ಜೀವನಕ್ಕೆ ತಳಹದಿಯಾಗಿದೆ ಎಂದರು.
ಇದೇ ಸಂದರ್ಭ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಫಾತೀಮಾ ಕಾನ್ವೆಂಟ್ ಶಾಲೆಯ ಕಾಲೇಜು ವಿಭಾಗದ ಮುಖ್ಯ ಶಿಕ್ಷಕಿ ಸಿಸ್ಟರ್ ಡಾ.ಜೆಸ್ವಿನಾ,
ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಥೆರೇಸ್ ಆ್ಯನ್, ರಮೋನಾ ಕೋಟ್ಸ್, ಕ್ರಸ್ವಲ್ ಕೋಟ್ಸ್, ರೋಡ್ನಿ ಕೋಟ್ಸ್, ರಾಯ್ಡನ್ ಕೋಟ್ಸ್, ಟ್ರಾನಿಯಾ ಕೋಟ್ಸ್ ಸೇರಿದಂತೆ ಶಾಲೆಯ ಶಿಕ್ಷಕ ವೃಂದದವರು ಹಾಗೂ ಆಡಳಿತ ಮಂಡಳಿಯವರು ಹಾಜರಿದ್ದರು.
Back to top button
error: Content is protected !!