ಕಾರ್ಯಕ್ರಮ

ಸೆಂಟರ್ ಆಫ್ ಟ್ರೇಡ್ ಯೂನಿಯನ್ ನ‌ 6ನೇ ಕೊಡಗು ಜಿಲ್ಲಾ ಸಮ್ಮೇಳನ

ಕುಶಾಲನಗರ, ನ 02: ಸೆಂಟರ್ ಆಫ್ ಟ್ರೇಡ್ ಯೂನಿಯನ್ ನ‌ 6ನೇ ಕೊಡಗು ಜಿಲ್ಲಾ ಸಮ್ಮೇಳನಕ್ಕೆ ಕುಶಾಲನಗರ ಕೇರಳ ಸಮಾಜ ಕಟ್ಟಡದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಂತೇಶ್ ಮಾತನಾಡಿ, ದುಡಿಯುವ ವರ್ಗ ಇಂದಿನ ಬಂಡವಾಳಶಾಹಿ ವ್ಯವಸ್ಥೆಯನ್ನು ಅರಿಯಬೇಕಿದೆ. ದುಡಿವ ವರ್ಗವನ್ನು ಶೋಷಣೆ ಮಾಡಿ ತಾನು ಬೆಳವಣಿಗೆ ಹೊಂದುವ ಬಂಡವಾಳಶಾಹಿ ವ್ಯವಸ್ಥೆ ವಿರುದ್ದ ಸಂಘರ್ಷದ ಹೋರಾಟ ನಡೆಸಿದಾಗ ಮಾತ್ರ ನಮ್ಮ‌ ಬದುಕಿನಲ್ಲಿ‌ ನಾವು ಮೇಲೇರಲು ಸಾಧ್ಯ.
ಕಾರ್ಮಿಕರ ಘನತೆಯ ಬದುಕಿಗೆ ಸಮಗ್ರ ರಕ್ಷಣೆ ಅಗತ್ಯವಿದೆ. ನಿರಂತರ ಹೋರಾಟಗಳಿಂದ ದೊರೆತ ಹಲವು ಕಾರ್ಮಿಕ ಪರ ಕಾನೂನುಗಳು ಒಂದೊಂದಾಗಿ ರದ್ದಾಗುತ್ತಿರುವುದು ಅತಂಕಕಾರಿ ಬೆಳವಣಿಗೆ. ಕಾರ್ಮಿಕರ ಬದುಕು ದಿನನಿತ್ಯ ಅಪಾಯದಲ್ಲಿದೆ‌ ಎಂದರು. ಮಹಿಳೆಯರು ಮಾಡುವ ಕೆಲಸಕ್ಕೆ‌ ಸಮಾನ ಕೂಲಿ ನೀಡಬೇಕು. ಆದರೆ ಇದು ದೊರಕುತ್ತಿಲ್ಲ. ತಾರತಮ್ಯ ಧೋರಣೆ ಮುಂದುವರೆದಿದೆ ಎಂದು‌ ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಮಿಕರು ಹಾಗೂ ಜನಪರವಾದ ಪಕ್ಷಕ್ಕೆ, ಸರಕಾರಕ್ಕೆ‌ ನಮ್ಮ ಬೆಂಬಲ ಸದಾ ಇದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್, ಜಿಲ್ಲೆಯಲ್ಲಿರುವ ಶ್ರಮಜೀವಿಗಳಿಂದ ವಿಶ್ವಮಟ್ಟದಲ್ಲಿ ಕೊಡಗಿ‌ನ ಕಾಫಿ, ಕರಿಮೆಣಸು ಹೆಸರುಗಳಿಸಿದೆ. ಆದರೂ ಕಾರ್ಮಿಕರು ಸೂಕ್ತ ಸೂರಿಲ್ಲದೆ ನದಿ ತಟದಲ್ಲಿ, ‌ಅರಣ್ಯ ಬದಿಯಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತಹವರಿಗೆ ನಿವೇಶನ ಒದಗಿಸುವಲ್ಲಿ ಸರಕಾರ ಮುಂದಾಗಬೇಕಿದೆ. ಜಿಲ್ಲೆಗೆ ಕಾರ್ಮಿಕ ನ್ಯಾಯಾಲಯ, ನ್ಯಾಯಾಧೀಶರ ಅಗತ್ಯವಿದೆ. ಎರಡು ದಿನಗಳ ಅಧಿವೇಶನದಲ್ಲಿ ಕಾರ್ಮಿಕ ಸಂಘಟನೆಗಳ ಪ್ರಮುಖರು ಸಕ್ರಿಯವಾಗಿ ಪಾಲ್ಗೊಂಡು ಚರ್ಚಿಸಿ ಮಾಹಿತಿ ಪಡೆದುಕೊಳ್ಳಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಇಂದಿಗೂ ಕೂಡ ಜೀತ ಪದ್ದತಿ ಅಗೋಚರ ರೀತಿಯಲ್ಲಿ ಮುಂದುವರೆದಿದೆ ಎಂದರೆ ತಪ್ಪಾಗಲಾರದು. ಕೆಲವು ಖಾಸಗಿ ತೋಟಗಳಲ್ಲಿ ಕಾರ್ಮಿಕರ ಶೋಷಣೆ ನಿರಂತರವಾಗಿರುವುದು ದುರಂತದ ಸಂಗತಿ ಎಂದರು.
ಎರಡು ದಿನಗಳ ಅಧಿವೇಶನದಲ್ಲಿ ಸಕಾರಾತ್ಮಕ ಚರ್ಚೆಗಳು ನಡೆದು ಸಮರ್ಪಕವಾಗಿ ಅನುಷ್ಠಾನಗೊಳ್ಳಲಿ. ಅಸಂಘಟಿತ ವಲಯಗಳನ್ನು ಸಂಘಟಿತರಾಗಿಸಬೇಕಿದೆ. ಸವಲತ್ತುಗಳಿಂದ ವಂಚಿತರಾದ ಬಹುಸಂಖ್ಯೆ ಫಲಾನುಭವಿಗಳಿಗೆ ನೆರವಿನ ಹಸ್ತ ಚಾಚಬೇಕಿದೆ. ಬಡವರು, ಆದಿವಾಸಿಗಳು ಸೇರಿದಂತೆ ಕಾಡಿನ ನಡುವಿನ ಕಾರ್ಮಿಕರ ರೋಧನೆಗೆ, ಅಸಹಾಯಕತೆಗೆ ನಾವು ನೆರವಾಗಬೇಕಿದೆ ಎಂದರು.

ಜಿಲ್ಲಾ ಜನರಲ್ ವರ್ಕರ್ಸ್ ಯೂನಿಯನ್ ನ ಹೆಚ್.ಬಿ. ರಮೇಶ್, ಸಿಐಟಿಯು ಜಿಲ್ಲಾ ಖಜಾಂಚಿ ಎನ್‌.ಡಿ. ಕುಟ್ಟಪ್ಪನ್ ಮಾತನಾಡಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎ.ಸಿ.ಸಾಬು, ಕಾಂಗ್ರೆಸ್ ಮುಖಂಡ ವಿ.ಎಸ್.ಸಜಿ ಸೇರಿದಂತೆ ವಿವಿಧ ಸಂಘಟನೆ ಮುಖಂಡರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!