ಕುಶಾಲನಗರ, ಅ 26: ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಮೊಟ್ಟಮೊದಲ ಬಾರಿಗೆ ಭಾರತ ಸರಕಾರದ ಜವಳಿ ಮಂತ್ರಾಲಯ, ಅಭಿವೃದ್ಧಿ ಆಯುಕ್ತರು (ಕರಕುಶಲ) ಇಲಾಖೆಯ ಅಡಿಯಲ್ಲಿ ಆಯೋಜಿಸಿದ್ದ
ಕ್ರಾಫ್ಟ್ ಅಂಡ್ ವೀವ್ಸ್ ಮಹೋತ್ಸವ-2023 ಕ್ಕೆ ಕೊಡಗು ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಅವರು ಚಾಲನೆ ನೀಡಿದರು.
ವಿವಿಧ ಮಳಿಗೆಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡ ಅವರು ವಸ್ತುಗಳನ್ನು ಖರೀದಿಸಿದರು. ದೇಶೀಯ ಉತ್ಪನ್ನಗಳನ್ನು ಹೆಚ್ಚಿನ ಮಟ್ಟದಲ್ಲಿ ಖರೀದಿಸಿ ಇಂತಹ ಉದ್ಯಮಗಳಿಗೆ ಗ್ರಾಹಕರು ಪ್ರೋತ್ಸಾಹ ನೀಡಬೇಕೆಂದು ಅವರು ಕರೆ ನೀಡಿದರು. ಒಂದೇ ಸೂರಿನಡಿ ವಿವಿಧ ಉತ್ಪನ್ನಗಳನ್ನು ಖರೀದಿಸಲು ಕಲ್ಪಿಸಿರುವ ಅವಕಾಶವನ್ನು ಗ್ರಾಹಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭ ಪಾಲ್ಗೊಂಡಿದ್ದ ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ ಮೇಳಕ್ಕೆ ಶುಭ ಕೋರಿದರು.
ಈ ಮೇಳದಲ್ಲಿ ಕರ್ನಾಟಕ ರಾಜ್ಯದ ಮತ್ತು ದೇಶದ ವಿವಿಧ ರಾಜ್ಯಗಳ ಸುಮಾರು 30ಕ್ಕೂ ಹೆಚ್ಚು ಕರಕುಶಲಕರ್ಮಿಗಳು ಮತ್ತು ಕೈಮಗ್ಗ ನೇಕಾರರು ಭಾಗವಹಿಸಿದ್ದರು. ಕರ್ನಾಟಕ ರಾಜ್ಯದ ಮೈಸೂರಿನ ಮರದ ಕೆತ್ತನೆಯ ವಸ್ತುಗಳು, ಚೆನ್ನಪಟ್ಟಣದ ಗೊಂಬೆಗಳು, ಮಂಡ್ಯದ ಮಣ್ಣಿನ ಮಡಿಕೆಗಳು, ಬೆಂಗಳೂರಿನ ಖಾದಿ ಶರ್ಟ್ ಗಳು ಮತ್ತು ಖಾದಿ ಉತ್ಪನ್ನಗಳು, ನಮ್ಮ ರಾಜ್ಯದ ಕೈಮಗ್ಗ ಉತ್ಪನ್ನಗಳು ಇದರ ಜೊತೆಗೆ ಸಿಕ್ಕಿಂ ರಾಜ್ಯದ ಮರದ ಗೃಹಲಂಕಾರಿಕ ವಸ್ತುಗಳು ಮತ್ತು ಕೈಮಗ್ಗ ವಸ್ತುಗಳು, ಆಂಧ್ರಪ್ರದೇಶ ರಾಜ್ಯದ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳು, ಪಶ್ಚಿಮ ಬಂಗಾಳದ ಕಾಂತ ಸೀರೆಗಳು, ಜಾರ್ಖಂಡ್ ಹಾಗೂ ಬಿಹಾರ್ ರಾಜ್ಯದ ತಸ್ಸರ್ ರೇಷ್ಮೆ ಸೀರೆಗಳು, ತಮಿಳುನಾಡು ರಾಜ್ಯದ ಪರಿಶುದ್ಧ ರೇಷ್ಮೆ ಸೀರೆಗಳು ಇನ್ನೂ ಹಲವು ಕರಕುಶಲ ಮತ್ತು ಕೈಮಗ್ಗ ವಸ್ತುಗಳು ಈ ವಿಶೇಷ ಮೇಳದಲ್ಲಿ ಕುಶಾಲನಗರದ ಜನತೆಗೆ ದೊರಕಲಿದೆ.
ಈ ಸಂದರ್ಭ ಮೈಸೂರು ಕರಕುಶಲ ಸೇವಾ ಕೇಂದ್ರದ ಸಹಾಯಕ ನಿರ್ದೇಶಕ ಕೆ.ಎಸ್.ಸುನಿಲ್ ಕುಮಾರ್ ಪಾಲ್ಗೊಂಡಿದ್ದರು.
ಈ ಮೇಳಕ್ಕೆ ಉಚಿತ ಪ್ರವೇಶವನ್ನು ಕಲ್ಪಿಸಿಕೊಡಲಾಗಿದೆ ಮತ್ತು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.
Back to top button
error: Content is protected !!