ಕಾರ್ಯಕ್ರಮ

ಕಾವೇರಿ‌ ನದಿಗೆ 149ನೇ ಮಹಾ ಆರತಿ ಕಾರ್ಯಕ್ರಮ

ಕುಶಾಲನಗರ ಸೆ 30: ಎರಡು ರಾಜ್ಯಗಳ ನಡುವೆ ನಡೆಯುತ್ತಿರುವ ಕಾವೇರಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಾವೇರಿ ಮಾತೆಯ ಮೂಲಕ ಮಾತ್ರ ಸಾಧ್ಯ ಎಂದು ಉದ್ಯಮಿ ಶಶಿಕುಮಾರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಕುಶಾಲನಗರದಲ್ಲಿ ಮಾತೆ ಕಾವೇರಿ ಮಹಾರತಿ ಬಳಗದ ಆಶ್ರಯದಲ್ಲಿ ನಡೆದ 149ನೆಯ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತಿಯೊಬ್ಬರೂ ಪ್ರಕೃತಿಯ ಆರಾಧನೆ ಮಾಡಬೇಕು. ಪ್ರಕೃತಿ ಉಳಿದಲ್ಲಿ ಮಾತ್ರ ಮಾನವನ ಉಳಿಯುವ ಸಾಧ್ಯ. ಜಲಮೂಲಗಳ ರಕ್ಷಣೆಗೆ ಪ್ರತಿಯೊಬ್ಬರೂ ಪಣತೊಡಬೇಕು.
ಈ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವ ಬಳಗದ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೊಡಗು ಜಿಲ್ಲಾ ನಿರ್ದೇಶಕರಾದ ಲೀಲಾವತಿ ಅವರು ಮಾತನಾಡಿ, ಸ್ವಚ್ಛ ಕಾವೇರಿ ಹರಿಯುವ ಸಂದರ್ಭ ನದಿ ನೀರು ಕಲುಷಿತ ಆಗದಂತೆ ಎಲ್ಲರೂ ಎಚ್ಚರವಹಿಸಬೇಕು. ನದಿಯ ನೀರನ್ನು ನೇರವಾಗಿ ಬಳಸುವ ಸಲುವಾಗಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು. ಈ ನಿಟ್ಟಿನಲ್ಲಿ ಕ್ಷೇತ್ರದ ಯೋಜನೆಯ ಕಾರ್ಯಕರ್ತರು ಎಲ್ಲಾ ರೀತಿಯಲ್ಲಿ ಕೈಜೋಡಿಸಲಿದ್ದಾರೆ ಎಂದರು.
ಈ ಸಂದರ್ಭ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಅಭಿಯಾನದ ರಾಜ್ಯ ಸಂಚಾಲಕ ಚಂದ್ರಮೋಹನ್, ಅಕ್ಟೋಬರ್ 20 ರಂದು ಜೀವನದಿ ಕಾವೇರಿಗೆ ಕುಶಾಲನಗರದಲ್ಲಿ 150ನೇ ಮಹಾ ಆರತಿ ಕಾರ್ಯಕ್ರಮ ನಡೆಯಲಿದೆ. ರಾಜ್ಯ ಮತ್ತು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಸ್ವಾಮೀಜಿಗಳು, ಸಾಧುಸಂತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಅರ್ಚಕರಾದ ಕೃಷ್ಣಮೂರ್ತಿ ಭಟ್ ಕುಂಕುಮಾರ್ಚನೆ ಅಷ್ಟೋತ್ತರ ನಂತರ ನದಿಗೆ ಸಾಮೂಹಿಕವಾಗಿ ಮಹಾ ಆರತಿ ಬೆಳಗಲಾಯಿತು. ಕಾವೇರಿ ನದಿ ನೀರಿನ ಗೊಂದಲ ಶೀಘ್ರವಾಗಿ ಬಗೆಹರಿಯಲೆಂದು ಪ್ರಾರ್ಥನೆ ಸಲ್ಲಿಸಲಾಯಿತು.
ಪುರಸಭೆ ಸದಸ್ಯರಾದ ರೂಪ ಉಮಾಶಂಕರ್, ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಪ್ರಧಾನ ಕಾರ್ಯದರ್ಶಿ ಮಂಡೆಪಂಡ ಬೋಸ್ ಮೊಣ್ಣಪ್ಪ, ಪ್ರಮುಖರಾದ ಕೆ ಜಿ ಮನು, ಮಂಜುನಾಥ್, ಉಮಾಶಂಕರ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!