ಕುಶಾಲನಗರ, ನ 10: ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಜೆಡಿಎಸ್ ರಾಜ್ಯ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು.
ಖಾಸಗಿ ಕಾರ್ಯ ನಿಮಿತ್ತ ಕುಶಾಲನಗರಕ್ಕೆ ಭೇಟಿ ನೀಡಿದ ಸಂದರ್ಭ ಪ್ರವಾಸಿ ಮಂದಿರ ಬಳಿ ಪಕ್ಷದ ಮುಖಂಡರು, ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು.
ಬಳಿಕ ಕಾರ್ಯಕರ್ತರೊಡನೆ ಪಕ್ಷದ ಚಟುವಟಿಕೆ ಬಗ್ಗೆ ಸಮಾಲೋಚನೆ ನಡೆಸಿದರು.
ನಂತರ ಮಾತನಾಡಿದ ಸಿ.ಎಂ. ಇಬ್ರಾಹಿಂ ಅವರು, ಭ್ರಷ್ಟ ಬಿಜೆಪಿ ಸರ್ಕಾರವನ್ನು ರಾಜ್ಯದ ಜನತೆ ಈ ಬಾರಿ ತಿರಸ್ಕರಿಸಲಿದ್ದಾರೆ. ಬಿಜೆಪಿ ಶಾಸಕರು ಮತ್ತು ಸಚಿವರು ಹಗರಣದಲ್ಲಿ ಮಗ್ನರಾಗಿ ಅಭಿವೃದ್ಧಿಯನ್ನು ಮರೆಯುತ್ತಿದ್ದಾರೆ. ಯಾವುದೇ ಕಾಮಗಾರಿಯ ಹಣವನ್ನು ನೀಡಲು 40% ಕಮಿಷನ್ ಪಡೆಯುತ್ತಿದ್ದಾರೆ. ಬಿಜೆಪಿ ಅವರ ಸಮಾವೇಶ ರಾಜ್ಯದಲ್ಲಿ ನಡೆಸುತ್ತಿದ್ದು ಜನರೇ ಸಮಾವೇಶದಿಂದ ಹೊರ ಹೋಗುತ್ತಿರುವುದು ನೀವು ಕಾಣುತ್ತಿದ್ದೀರಿ. ಈ ಬಾರಿ ಅವರು ಮನೆಗೆ ಹೋಗುವುದು ಖಚಿತ ಎಂದರು.
ಇನ್ನು ಕಾಂಗ್ರೆಸ್ ನವರು ತಮ್ಮಲ್ಲಿ ಇದ್ದ ಕಾರ್ಮಿಕರ ಹಾಗೂ ಮುಸ್ಲಿಮರ ಮತವನ್ನು ಕಳೆದುಕೊಂಡಿದ್ದು ಅಧಿಕಾರದ ಕನಸನ್ನು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಪಕ್ಷ ಕಾರ್ಮಿಕರ, ಬಡವರ ರೈತರ ಬಗ್ಗೆ ಕಾಳಜಿ ಇರುವ ಪಕ್ಷ. ಈ ಬಾರಿ ರಾಜ್ಯದ ಜನತೆ ಜೆಡಿಎಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ. ಕೊಡಗಿನ ಎರಡು ಕ್ಷೇತ್ರದಲ್ಲಿ ಈ ಬಾರಿ ಗೆಲ್ಲುವ ಅಭ್ಯರ್ಥಿಗಳಿದ್ದು ಜೆಡಿಎಸ್ ಎರಡೂ ಕ್ಷೇತ್ರದಲ್ಲಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ಮುಖಂಡರಾದ ನಾಪಂಡ ಮುತ್ತಪ್ಪ, ಸಿ.ಎಲ್.ವಿಶ್ವ, ಎಚ್.ಟಿ. ವಸಂತ್ , ಚಂದ್ರು, ಮಹದೇವ್, ವೆಂಕಿ, ರಿಜ್ವಾನ್, ತ್ರಿನೇಶ್ ಮತ್ತಿತರರು ಇದ್ದರು.
Back to top button
error: Content is protected !!