ಕಾರ್ಯಕ್ರಮ
ಕುಶಾಲನಗರದ ಹಿಲಾಲ್ ಮಸೀದಿ ಹಾಗೂ ದಾರುಲ್ ಉಲೂಂ ಮದ್ರಸ ಆಶ್ರಯದಲ್ಲಿ ಈದ್ ಮಿಲಾದ್

ಕುಶಾಲನಗರ, ಅ 09: ಇಸ್ಲಾಂ ಧರ್ಮವು ಶಾಂತಿ, ಸಮಾನತೆ, ಸೌಹಾರ್ದತೆಯನ್ನು ಸಾರುವ ಧರ್ಮವಾಗಿದೆ ಎಂದು ಕುಶಾಲನಗರ ದಾರುಲ್ ಉಲೂಂ ಮದ್ರಸ ಹಾಗೂ ಪಾಳಿಲಾ ಶರೀಅತ್ ಕಾಲೇಜಿನ ಪ್ರಾಂಶುಪಾಲರಾದ ಎಂ.ತಮ್ಲೀಕ್ ದಾರಿಮಿ ಹೇಳಿದರು.
ಶಾಂತಿದೂತರಾದ ಪ್ರವಾದಿ ಪೈಗಂಬರ್ ಅವರು ಜನ್ಮ ದಿನದ ಅಂಗವಾಗಿ ಕುಶಾಲನಗರದ ಹಿಲಾಲ್ ಮಸೀದಿ ಹಾಗೂ ದಾರುಲ್ ಉಲೂಂ ಮದ್ರಸ ಆಶ್ರಯದಲ್ಲಿ
ಭಾನುವಾರ ಕುಶಾಲನಗರದ ಶಾದಿ ಮಹಲ್ ನಲ್ಲಿ ಏರ್ಪಡಿಸಿದ್ದ ಈದ್ ಮಿಲಾದ್
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವು ಸಂಘಟನೆಗಳು, ಕೆಲವು ರಾಜಕರಣಿಗಳು ಇಸ್ಲಾಂ ಧರ್ಮವನ್ನು ಗುರಿಯಾಗಿಸಿಕೊಂಡು ಪ್ರವಾದಿ ವರ್ಯರನ್ನು ಅವಹೇಳಿಸುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಇದರಿಂದ ಯಾವುದೇ ಮುಸಲ್ಮಾನರ ಆತ್ಮಸ್ಥೈರ್ಯವನ್ನು ಕುಗ್ಗಿಸಲು ಸಾಧ್ಯವಿಲ್ಲ. ಕಾರಣ ಪುಣ್ಯ ಪ್ರವಾದಿಯವರು ಎಲ್ಲರನ್ನೂ ಪ್ರೀತಿಸುವ ಮತ್ತು ಶಾಂತಿ ಸಹಭಾಳ್ವೆಯಿಂದ ಜೀವಿಸಲು ತಿಳಿಸಿದ್ದಾರೆ. ಅನ್ಯರಿಗೆ ತೊಂದರೆ ನೀಡುವವನು ನೈಜ ಮುಸಲ್ಮಾನನಲ್ಲಾ ಎಂದು ಸಾರುವ ಇಸ್ಲಾಂ ಧರ್ಮ, ದೃಷ್ಕೃತ್ಯಗಳನ್ನು ನಡೆಸುವವರನ್ನು ವಿರೋಧಿಸುತ್ತದೆ ಎಂದರು. ತಾಲ್ಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕರೀಂ ಮಾತನಾಡಿ, ಪ್ರವಾಸಿಯವರು ವಿಶ್ವ ಶ್ರೇಷ್ಟ ಮಾನವರಾಗಿದ್ದಾರೆ. ಅವರ ಜೀವನ ಸಂದೇಶಗಳನ್ನು ಅರಿತು ಅದೆಷ್ಟೋ ಅನುಯಾಯಿಗಳು ಸ್ವಯಿಚ್ಚೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸುತ್ತಿದ್ದಾರೆ. ನೆರೆಯವರನು ಹಸಿದಿರುವಾಗ ತಾನು ಹೊಟ್ಟೆ ತುಂಬಿಸಿಕೊಳ್ಳುವವನು ನನ್ನವನಲ್ಲಾ ಎಂದು ಸಾರಿದ ಮಹಾ ನಾಯಕರಾಗಿದ್ದಾರೆ ಪ್ರವಾದಿಯವರು ಎಂದರು.ನಿವೃತ್ರ ಶಿಕ್ಷಕರಾದ ನಜ಼ೀರ್ ಅಹಮ್ಮದ್ ಮಾತನಾಡಿ, ಪ್ರವಾಸಿಯವರು ಜೀವನ ಸಂದೇಶಗಳನ್ನು ಸಾರಿದರು. ಪ್ರಸ್ತುತ ಕಾಲಗಟ್ಟದಲ್ಲಿ ಮಾನವೀಯತೆ ಮರೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಜಾಮಿಯಾ ಮಸೀದಿ ಅಧ್ಯಕ್ಷ ಮುಜೀಬುರ್ರಹಮಾನ್ ಮಾತನಾಡಿ, ಪ್ರವಾಸಿಯವರು ಸಾರಿದ ಸಂದೇಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು. ಆದರೆ ಯುವ ಸಮೂಹ ಆಧುಕತೆ, ತಂತ್ರಜ್ಞಾನಕ್ಕೆ ಮಾರುಹೋಗಿ ಧರ್ಮದ ಆಚಾರ, ವಿಚಾರ ಮತ್ತು ಸಂಸ್ಕ್ರತಿಯಿಂದ ದೂರ ಸರಿಯುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ಬೌದ್ಧಿಕ ವಿದ್ಯಾಭ್ಯಾಸ ದೊಂದಿಗೆ ಧಾರ್ಮಿಕ ವಿದ್ಯಾಭ್ಯಾಸವನ್ನು ನೀಡಬೇಕು. ಯುವ ಸಮೂಹ ಕ್ಷಣ ಮಾತ್ರದ ಸುಖಕ್ಕಾಗಿ ಅನಾವಶ್ಯಕ ಚಟುವಟಿಕೆಗಳಿಗೆ ದಾಸರಾಗುತ್ತಿದ್ದು, ತಮ್ಮ ಭವಿಷ್ಯ ವನ್ನು ಉತ್ತಮವಾಗಿ ರೂಪಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಆದ್ದರಿಂದ ತಪ್ಪು ದಾರಿಯಿಡಿದಿರುವವರಿಗೆ ಸೂಕ್ತ ಸಂದೇಶ ಮತ್ತು ತಿಳುವಳಿಗಕೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಕಾರ್ಯಕ್ರಮವನ್ನು ದಾರುಲ್ ಉಲೂಂ ಮದ್ರಸ ಧರ್ಮಗುರುಗಳಾದ ಸೂಫಿ ದಾರಿಮಿ ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಕಮಿಟಿ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ವಹಿಸಿದ್ದರು.ಅಧ್ಯಾಪಕರಾದ ಉನೈಸ್ ಫೈಜಿ಼ಯವರು ಪ್ರಾರ್ಥನೆ ಮಾಡುವ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಹಿಲಾಲ್ ಮಸೀದಿ ಕಾರ್ಯದರ್ಶಿ ಅಬ್ದುಲ್ ಮಜೀದ್ ಅವರು ಸ್ವಾಗತಿಸಿದರು.ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೂರು ತಂಡಗಳಲ್ಲಿ ಟೀಂ ಹಿಕ್ ಮಾ ಪ್ರಥಮ, ಟೀಂ ಸಲಾಮಾ ತಂಡ ದ್ವಿತೀಯ ಹಾಗೂ ಟೀಂ ರಹ್ ಮಾ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು. ನಂತರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಯಿತು.ಈ ಸಂದರ್ಭ ಹಿಲಾಲ್ ಮಸೀದಿಯ ಪದಾಧಿಕಾರಿಗಳು ಹಾಗೂ ದಾರುಲ್ ಉಲೂಂ ಮದ್ರಸದ ಅಧ್ಯಾಪಕರು, ಊರಿನ ಪ್ರಮುಖರು ಇದ್ದರು.ಈದ್ ಮಿಲಾದ್ ಪ್ರಯುಕ್ತ ಮೆರವಣಿಗೆ: ಈದ್ ಮಿಲಾದ್ ಪ್ರಯುಕ್ತವಾಗಿ ಕುಶಾಲನಗರದ ಪ್ರಮುಖ ಬೀದಿಗಳಲ್ಲಿ ಸಾವಿರಕ್ಕೂ ಹೆಚ್ಚು ಜನರು ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ದಫ್, ಸ್ಕೌಟ್, ಹೂಗಳ ಪ್ರದರ್ಶನ ಜನರ ಗಮನ ಸೆಳೆಯಿತು. ಮೆರವಣಿಯಲ್ಲಿ ಮದೀನಾದ ಸ್ತಬ್ಧ ಚಿತ್ರ ವಿಶೇಷವಾಗಿತ್ತು. ಪುಟ್ಟ ಮಕ್ಕಳು ಸಮವಸ್ತ್ರ ಆಕರ್ಷಣೀಯವಾಗಿತ್ತು. ಪ್ರವಾದಿಯವರ ಸಂದೇಶ ವಾಕ್ಯವಾದ ಶಾಂತಿ, ಸೌಹಾರ್ದತೆಯ ಕೂಗು ಮೆರವಣಿಗೆಯಲ್ಲಿ ಕೇಳಿ ಬಂತು.



