ಕುಶಾಲನಗರ, ನ 23:
ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ ವಿವಿಧ ಇಲಾಖೆಗಳ ಮತ್ತು ನಯರಾ ಎನರ್ಜಿ ಲಿಮಿಟೆಡ್ ನ ಪ್ರಾಜೆಕ್ಟ್ ಸಮರ್ಥ್ ಸಹಯೋಗದೊಂದಿಗೆ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಕುಶಾಲನಗರದಿಂದ ಮೈಸೂರಿಗೆ ಹಮ್ಮಿಕೊಂಡಿರುವ ಜಾಥಾಗೆ ಕುಶಾಲನಗರದಲ್ಲಿ ಚಾಲನೆ ನೀಡಲಾಯಿತು.
ತಾಪಂ ಇ.ಒ. ಅಪ್ಪಣ್ಣ ಅವರು ಹಸಿರು ನಿಶಾನೆ ತೋರುವ ಮೂಲಕ ವಾಹನ ಜಾಥಾಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ವಿಶೇಷ ಚೇತನರು ಸಮಾಜದ ಅವಿಭಾಜ್ಯ ಅಂಗ. ವಿಶೇಷ ಚೇತನರು ಎಂಬ ಕಾರಣಕ್ಕೆ ಅವರ ಸಾಮರ್ಥ್ಯವನ್ನು ಅಲ್ಲಗೆಳೆಯುವಂತಿಲ್ಲ. ಅಪ್ರತಿಮ ಸಾಧನೆಗಳ ಮೂಲಕ ಜಗತ್ತಿನ ಗಮನ ಸೆಳೆಯುವ ಮಟ್ಟಕ್ಕೆ ವಿಶೇಷ ಚೇತನರಲ್ಲಿ ಪ್ರತಿಭೆ ಅಡಗಿದೆ. ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರು ತಮ್ಮ ಛಾಪನ್ನು ಮೂಡಿಸಿದ್ದಾರೆ ಎಂದು ವಿವರಿಸಿದರು.
ಕುಶಾಲನಗರ ರೋಟರಿ ಸಂಸ್ಥೆ ಮುಖ್ಯಸ್ಥರೂ ಆದ ವಿವೇಕಾನಂದ ಯೂತ್ ಮೂವ್ ಮೆಂಟ್ ಸಲಹಾ ಸಮಿತಿ ಸದಸ್ಯಎಂ.ಡಿ.ರಂಗಸ್ವಾಮಿ ಮಾತನಾಡಿ, ವಿಶೇಷ ಚೇತನರು ನಮ್ಮಂತೆ ಬದುಕುವ ಹಕ್ಕನ್ನು ಹೊಂದಿರುವವರು ಎಂಬುದನ್ನು ಮರೆಯಬಾರದು. ಅವರೂ ಕೂಡ ಸಮಾಜದಲ್ಲಿ ಸೂಕ್ತ ಸ್ಥಾನಮಾನ ಹೊಂದಲು ಅರ್ಹರಿದ್ದಾರೆ. ಇಂತಹ ಕಾರ್ಯಕ್ರಮಗಳು ಅವರಲ್ಲಿ ಮತ್ತಷ್ಟು ಜಾಗೃತಿ ಉಂಟುಮಾಡುವಲ್ಲಿ ಸಹಕಾರಿಯಾಗಲಿದೆ ಎಂದರು.
ವಿಕಲಚೇತನರ ಕಲ್ಯಾಣಾಧಿಕಾರಿ ಕೆ.ಜಿ.ವಿಮಲ ಮಾತನಾಡಿದರು.
ಈ ಸಂದರ್ಭ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್, ಕೊಡಗು ಶಾಖೆಯ ಕಾರ್ಯಕ್ರಮ ವ್ಯವಸ್ಥಾಪಕ ಅಂಕಾಚಾರಿ, ಯೋಜನಾ ನಿರ್ದೇಶಕ ಶಂಕರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ.ಶಾಂತಿ, ಕುಶಾಲನಗರ ರೋಟರಿ ಸಂಸ್ಥೆ ಅಧ್ಯಕ್ಷ ರುದ್ರೇಶ್ ಪಟೇಲ್, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸೀತಾಲಕ್ಷ್ಮಿ, ಶಿಶು ಅಭಿವೃದ್ಧಿ ಯೋಜನೆ ಇಲಾಖೆಯ ಸಾವಿತ್ರಮ್ಮ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯ ಸಿಬ್ಬಂದಿಗಳಾದ ರಮೇಶ್, ರವಿಕಿರಣ್, ಬೋರಯ್ಯ, ಸುನೀತಾ, ಭವಾನಿ, ಚೇತನ, ಮಹೇಶ್, ಅಂಜಲಿ ಸೇರಿದಂತೆ ವಿಕಲಚೇತನ ಸಬಲೀಕರಣ ಇಲಾಖೆಯ ಸಿಬ್ಬಂದಿಗಳು, ಶಿಶು ಅಭಿವೃದ್ಧಿ ಇಲಾಖೆ ಸಿಬ್ಬಂದಿಗಳು ಇದ್ದರು.
ಕುಶಾಲನಗರದಿಂದ ಆರಂಭಗೊಂಡ ಜಾಥಾ ನವೆಂಬರ್ ೩೦ರಂದು ಮೈಸೂರಿನಲ್ಲಿ ಮುಕ್ತಾಯಗೊಳ್ಳಲಿದೆ. ಎರಡು ಜಿಲ್ಲೆಗಳ ಎಲ್ಲಾ ೧೧ ತಾಲ್ಲೂಕುಗಳಲ್ಲಿ ಚಲಿಸಿ ಸುಮಾರು ೫೫೦ ಕಿಲೋಮೀಟರ್ ದೂರವನ್ನು ಕ್ರಮಿಸುವ ಈ ಜಾಥಾವು ಹಲವು ಗ್ರಾಮಗಳು, ಪಟ್ಟಣಗಳು ಹಾಗೂ ಸಮುದಾಯಗಳಲ್ಲಿ ಬೀದಿನಾಟಕ ಮೂಲಕ ವಿಶೇಷಚೇತನರ ಕುರಿತು ಅರಿವು ಮತ್ತು ಜಾಗೃತಿಯನ್ನು ಮೂಡಿಸಲಾಗುತ್ತದೆ.
Back to top button
error: Content is protected !!