ಕುಶಾಲನಗರ , ಅ 14: ಕುಶಾಲನಗರದ ತಾವರೆಕೆರೆ ಮುಂಭಾಗದಲ್ಲಿರುವ ಡಿ.ಆರ್.ಸಿ. ಚಿತ್ರಮಂದಿರ ಹಾಗೂ ರಿಲಯನ್ಸ್ ಸ್ಮಾರ್ಟ್ ಬಜಾರ್ ಕಟ್ಟಡಗಳ ಮುಂಭಾಗದಲ್ಲಿ ದಟ್ಟಣೆ ಹಿನ್ನೆಲೆಯಲ್ಲಿ ಸೂಕ್ತ ಕ್ರಮವಹಿಸಲು ಕೋರಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷರ ನಿರ್ದೇಶನದ ಮೇರೆಗೆ ತಾಲೂಕು ಮಹಿಳಾ ಅಧ್ಯಕ್ಷೆ ಶಶಿಕಲಾ ಮತ್ತು ನಗರಾಧ್ಯಕ್ಷ ಡಿ.ಆರ್.ಯೋಗೇಶ್ ನೇತೃತ್ವದಲ್ಲಿ ಪದಾಧಿಕಾರಿಗಳು ಮುಖ್ಯಾಧಿಕಾರಿ ಗಿರೀಶ್ ಅವರ ಬಳಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.
ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಹಾದುಹೋಗುತ್ತಿದ್ದು ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ಮುಗಿದ ತಕ್ಷಣ ಹೊರಬರುವ ಪ್ರೇಕ್ಷಕರು ಹಾಗೂ ಸ್ಮಾರ್ಟ್ ಬಜಾರ್ಗೆ ಆಗಮಿಸುವ ಗ್ರಾಹಕರು ಏಕಾಏಕಿ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುವುದರಿಂದ ಅಪಘಾತಗಳು ಸಂಭವಿಸುವ ಗಂಭೀರ ಅಪಾಯವಿದೆ.
ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಕೆಲವು ಅಪಘಾತಗಳು ಸಂಭವಿಸಿದ್ದು, ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಅನಾಹುತಗಳು ತಪ್ಪಿವೆ. ಆದರೆ, ಇದೇ ಪರಿಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ದೊಡ್ಡ ಅಪಘಾತಗಳು ಸಂಭವಿಸಿ ಅಮೂಲ್ಯ ಜೀವಗಳಿಗೆ ಅಪಾಯ ಉಂಟಾಗುವ ಸಾಧ್ಯತೆಯಿದೆ. ಈ ಕುರಿತು ಸಾರ್ವಜನಿಕರಿಂದಲೂ ಹಲವು ದೂರುಗಳು ಕೇಳಿಬಂದಿವೆ.
ಆದ್ದರಿಂದ, ಸಾರ್ವಜನಿಕರ ಜೀವ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಚಿತ್ರಮಂದಿರ ಹಾಗೂ ಸ್ಮಾರ್ಟ್ ಬಜಾರ್ನ ಆಡಳಿತ ಮಂಡಳಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿ. ಕಟ್ಟಡಗಳ ಮುಂಭಾಗದಲ್ಲಿ ಸೂಕ್ತ ಭದ್ರತಾ ಸಿಬ್ಬಂದಿಯನ್ನು ನೇಮಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಸಾರ್ವಜನಿಕರು ರಸ್ತೆ ದಾಟುವ ಸಂದರ್ಭದಲ್ಲಿ ವಾಹನ ಸಂಚಾರವನ್ನು ನಿಯಂತ್ರಿಸಲು ಹಾಗೂ ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಲು ನೆರವಾಗುವಂತೆ ತರಬೇತಿ
ಪಡೆದ ಸಿಬ್ಬಂದಿಯನ್ನು ನಿಯೋಜಿಸುವುದು ಅಗತ್ಯವಾಗಿದೆ. ಸಾಧ್ಯವಾದಲ್ಲಿ, ಸಂಬಂಧಪಟ್ಟ ಸಹಕಾರದೊಂದಿಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಸಂಚಾರಿ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಸಾರ್ವಜನಿಕರ ಸುರಕ್ಷತೆಗಾಗಿ ಎಚ್ಚರಿಕೆ ಫಲಕಗಳು, ರಸ್ತೆ ದಾಟುವ ಸ್ಥಳದ ಗುರುತುಗಳು ಹಾಗೂ ಇತರ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುವ ಬಗ್ಗೆಯೂ ಗಮನಹರಿಸಬೇಕಾಗಿ ಜಿಲ್ಲಾಧ್ಯಕ್ಷ ದೀಪಕ್ ಕನ್ನಡಿಗ ಆಗ್ರಹಿಸಿದರು.
ಪಟ್ಟಣದಲ್ಲಿ ಪಾದಾಚಾರಿ ಮಾರ್ಗಗಳು ಅತಿಕ್ರಮಣವಾಗಿವೆ. ಸಾರ್ವಜನಿಕರು ನಡೆದಾಡಲು ಅನಾನುಕೂಲ ಉಂಟಾಗಿದೆ. ವಾಹನಗಳ ಪಾರ್ಕಿಂಗ್ ಅವ್ಯವಸ್ಥೆ ಉಂಟಾಗುತ್ತಿದೆ. ಇದನ್ನೂ ಕೂಡ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ನಗರಾಧ್ಯಕ್ಷ ಯೋಗೇಶ್ ಡಿ.ಆರ್.ಒತ್ತಾಯಿಸಿದರು.
ಈ ಸಂದರ್ಭ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಸಂಧ್ಯಾ ಗಣೇಶ್, ಮಡಿಕೇರಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಆನಂದ್, ಕುಶಾಲನಗರ ತಾಲೂಕು ಅಧ್ಯಕ್ಷ ಸಿ.ಎಂ.ಆಸಿಫ್ ಮತ್ತಿತರರು ಇದ್ದರು.
Back to top button
error: Content is protected !!