ಕಾರ್ಯಕ್ರಮ

ಸೀಗೆಹೊಸೂರಿನಲ್ಲಿ ವಾಣಿಜ್ಯ ಮಳಿಗೆ, ಗೋದಾಮು ಕಟ್ಟಡ ಉದ್ಘಾಟನೆ

ಕೂಡಿಗೆ, ಸೆ. 8: ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸೀಗೆಹೊಸೂರು ಗ್ರಾಮದಲ್ಲಿ ರೂ 29 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆ ಮತ್ತು ಗೋದಾಮು ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕುಶಾಲನಗರ ತಾಲೂಕು ಆಹಾರ ನಿರೀಕ್ಷಕಿ ಸ್ವಾತಿ ನ್ಯಾಯಬೆಲೆ ಅಂಗಡಿ ಉದ್ಘಾಟಿಸಿದರು. ಸಾಹಿತಿ ಭಾರದ್ವಾಜ್ ಕೆ ಆನಂದತೀರ್ಥ ಅವರು ಗೊಬ್ಬರ ಮಾರಾಟ ಮಳಿಗೆ ಉದ್ಘಾಟಿಸಿದರು. ಸಂಘದ ಹಿರಿಯ ನಿರ್ದೇಶಕ ಕೆ.ಟಿ.ಅರುಣ್ ಕುಮಾರ್ ಹಾಗೂ ವೃತ್ತಿ ಪರ ನಿರ್ದೇಶಕರಾದ ನಾಗೇಂದ್ರಬಾಬು ಅವರು ಗೋದಾಮು ಉದ್ಘಾಟಿಸಿದರು. ಸಾಹಿತಿ ಭಾರದ್ವಾಜ ಆನಂದತೀರ್ಥ ಮಾತನಾಡಿ, ಅಧಿಕಾರವಧಿಯಲ್ಲಿ ಬರುವ ಆರೋಪ, ತೆಗಳಿಕೆಗಳಿಗೆ ಗಮನ ಹರಿಸದೆ ಸಂಘದ ಅಭಿವೃದ್ದಿಗೆ, ಸದಸ್ಯರಿಗೆ ಅನುಕೂಲ‌ ಒದಗಿಸುವ ಬಗ್ಗೆ ಮಾತ್ರ ಚಿಂತನೆ ಹರಿಸಬೇಕು ಎಂದು ಸಲಹೆ ನೀಡಿದರು.

 

ಆರ್.ಕೆ.ನಾಗೇಂದ್ರಬಾಬು ಮಾತನಾಡಿ, ಸಂಘದ ಏಳಿಗೆಗೆ ಸದಸ್ಯರ ಸಹಕಾರ ಅತಿಮುಖ್ಯ. ಸಂಘದ ಗೌರವ, ಕೀರ್ತಿ ಎತ್ತಿ ಹಿಡಿಯುವ ಕೆಲಸಕ್ಕೆ ಆಡಳಿತ ಮಂಡಳಿಯೊಂದಿಗೆ ಸದಾ ಕೈಜೋಡಿಸಬೇಕಿದೆ ಎಂದರು.

ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಅಧ್ಯಕ್ಷತೆ ವಹಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಬಾರ್ಡ್ ಮೂಲಕ ಶೇ.1 ರ ಬಡ್ಡಿ ದರದಲ್ಲಿ ಸಾಲ ಪಡೆದು
ಸೀಗೆಹೊಸೂರಿನಲ್ಲಿ 2.3 ಎಕರೆ ಖರೀದಿಸಿ ಈ ಗೋದಾಮು, ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಜಾಗ ಖರೀದಿ ವಿಚಾರದಲ್ಲಿ ಕೂಡ ಕೆಲವರು ಗೊಂದಲ‌ ಮೂಡಿಸಿ ಭ್ರಷ್ಟಾಚಾರ ಆರೋಪ ಹೊರಿಸಿದ್ದರೂ ಕೂಡ ಆಡಳಿತ ಮಂಡಳಿ ಮತ್ತು ಸದಸ್ಯರ ಸಹಕಾರದಿಂದ ಈ ಕಾರ್ಯ ಸಾಧ್ಯವಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎಸ್. ಆರ್. ಸುನಿಲ್ ರಾವ್, ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು, ಸಂಘದ ಕಾರ್ಯದರ್ಶಿ ಹರ್ಷ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!