ಕುಶಾಲನಗರ, ಆ 01:ಜಲಾಶಯದ ನೀರನ್ನು ರೈತರಿಗೆ ಬೆಳೆ ಬೆಳೆಯಲು ನೀಡುವುದಿಲ್ಲ ಎಂಬ ರಾಜ್ಯ ಸರ್ಕಾರದ ಆದೇಶದಲ್ಲಿ ಕೊಡಗು ಜಿಲ್ಲೆಯ ರೈತರಿಗೆ ವಿನಾಯತಿ ನೀಡಬೇಕು ಎಂದು ಕೂಡುಮಂಗಳೂರು ಗ್ರಾಪಂ ಮಾಜಿ ಅಧ್ಯಕ್ಷ ಭಾಸ್ಕರ್ ನಾಯಕ್ ವನಂತಿಸಿದ್ದಾರೆ.
ರೈತರು ಜಲಾಶಯದ ನೀರನ್ನು ನಂಬಿ ಬಿತ್ತನೆ ಮಾಡಬೇಡಿ ಎಂಬ ರಾಜ್ಯ ಸರ್ಕಾರದ ಸುತ್ತೋಲೆ ಕುರಿತು ಮಾತನಾಡಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ್ ನಾಯಕ್ ರವರು ಪೂರ್ವ ಮುಂಗಾರು ಮತ್ತು ಮುಂಗಾರು
ದುರ್ಬಲಗೊಂಡಿದ್ದರಿಂದ ಜಲಾಶಯದಲ್ಲಿನ ನೀರನ್ನು ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ರಾಜ್ಯದ ರೈತರಿಗೆ ಜಲಾಶಯದ ನೀರನ್ನು ಅವಲಂಬಿಸಿ ಬೆಳೆ ಬಿತ್ತನೆ ಕಾರ್ಯ ಕೈಗೊಳ್ಳಬಾರದು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಆದರೆ ಇದೀಗ ನಮ್ಮ ಕೊಡಗಿನಲ್ಲಿ ಕೆಲವು ದಿನಗಳಿಂದ ಒಳ್ಳೆಯ ಮಳೆಯಾಗಿ ಕೊಡಗಿನ ಏಕೈಕ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆ ರಾಜ್ಯದಲ್ಲಿಯೇ ಎಲ್ಲಾ ಅಣೆಕಟ್ಟೆಗಿಂತಲೂ ಮೊದಲು ತುಂಬಿ ಕಳೆದ 8-9 ದಿನಗಳಿಂದ ನದಿಗೆ ನೀರು ಹರಿಸಲಾಗುತ್ತಿದೆ, ಹಾರಂಗಿ ಅಣೆಕಟ್ಟೆಯ ನೀರನ್ನು ಅವಲಂಬಿತರಾಗಿರುವ ಕೊಡಗಿನ ರೈತರು ಪ್ರತಿ ವರ್ಷ 5 ಎಕರೆ, 10 ಎಕರೆ ಭತ್ತ ಬೆಳೆಯುತ್ತಿದ್ದ ರೈತರು 1 ಎಕರೆ 2 ಎಕರೆಗೆ ಆಗುವಷ್ಟು ಮಾತ್ರ ಬಿತ್ತನೆ ಮಾಡಿರುತ್ತಾರೆ. ಮಾಡಿರುವ ಅಲ್ಪ ಬೆಳೆಗಾದರೂ ಜಲಾಶಯದ ನೀರು ಸಿಗುತ್ತಾ ಎಂದು ಕಾಯುತ್ತಿರುವುದು ಬೇಸರದ ಸಂಗತಿ, ರಾಜ್ಯಕ್ಕೆ ನೀರುಹರಿಸುತ್ತಿರುವ ಕೊಡಗಿನ ರೈತರ ಕಣ್ಣೀರು ಒರೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತಕ್ಷಣ ಕೊಡಗಿನ ರೈತರಿಗೆ ವಿನಾಯಿತಿ ನೀಡುವ ಮುಖಾಂತರ ಕೊಡಗಿನ ರೈತ ಬೆಳೆಯುವ ಬೆಳೆಗೆ ನೀರು ಹರಿಸಲು ಅನುಮತಿ ನೀಡಬೇಕು. ರೈತರು ವಾಡಿಕೆಯಂತೆ ತಮ್ಮ ಎಲ್ಲಾ ಜಾಗದಲ್ಲೂ ಬೆಳೆ ಬೆಳೆಯಲು ನೀರು ಹರಿಸುವ ಮುಖಾಂತರ ಅವಕಾಶ ಮಾಡಿಕೊಡಬೇಕು ಎಂದು ಅವರು ಪ್ರಕಟಣೆ ಮೂಲಕ ಒತ್ತಾಯಿಸಿದರು.
Back to top button
error: Content is protected !!