ಕುಶಾಲನಗರ, ಜೂ 09: ಮುಂಗಾರು ಮಳೆಯಿಂದ ಸಂಭವಿಸಬಹುದಾದ ಪ್ರಕೃತಿ ವಿಕೋಪ ನಿರ್ವಹಣೆಗಾಗಿ ತೆಗೆದುಕೊಂಡಿರುವ ಮುಂಜಾಗೃತ ಕ್ರಮಗಳ ಬಗ್ಗೆ ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆ ಶಾಸಕ ಡಾ.ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕ ಡಾ.ಮಂತರ್ ಗೌಡ ಅವರು, ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಆರಂಭಗೊಂಡಿದ್ದು, ಯಾವುದೇ ಅನಾಹುತಗಳು ಸಂಭವಿಸದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಮಳೆ ಪ್ರಮಾಣ ಅಧಿಕಗೊಂಡಾಗ ನದಿ ಅಂಚಿನಲ್ಲಿರುವ ನೆಲ್ಲಿಹುದಿಕೇರಿ,ವಾಲ್ನೂರು ತ್ಯಾಗತ್ತೂರು, ನಂಜರಾಯಪಟ್ಟಣ, ಹೊಸಪಟ್ಟಣ, ಗುಡ್ಡೆಹೊಸೂರು, ಕುಶಾಲನಗರ ಭಾಗದ ಇಂದಿರಾ ಬಡಾವಣೆ, ಸಾಯಿ ಬಡಾವಣೆ, ಕುವೆಂಪು ಬಡಾವಣೆ, ಕೂಡುಮಂಗಳೂರು, ಕೂಡಿಗೆ,ಕಣಿವೆ,ಹೆಬ್ಬಾಲೆ, ತೊರೆನೂರು,ಶಿರಂಗಾಲ ಭಾಗದಲ್ಲಿ ಮನೆಗಳಿಗೆ ನದಿ ನೀರು ನುಗ್ಗಿ ಜಲಾವೃತ್ತಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ನದಿ ಅಂಚಿನಲ್ಲಿರುವ ಮನೆಗಳಿಗೆ ನೋಟಿಸ್ ನೀಡಬೇಕು.ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲು ಸಿದ್ದತೆ ಮಾಡಿಕೊಳ್ಳಬೇಕು.ಜೊತೆಗೆ ಶಾಲೆಗಳಲ್ಲಿ ಗಂಜಿ ಕೇಂದ್ರ ತೆರೆಯಲು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲ್ಲೂಕು ವ್ಯಾಪ್ತಿಯಲ್ಲಿರುವ ಅಸುರಕ್ಷಿತ ಕಟ್ಟಡಗಳನ್ನು ಗುರುತು ಮಾಡಿ ಅಂತಹ ಮನೆಗಳಿಗೆ ನೋಟಿಸ್ ನೀಡಿ ಸಾಧ್ಯವಾದರೆ ಬೇರೆ ಕಡೆಗೆ ಅವರನ್ನು ಸ್ಥಳಾಂತರ ಮಾಡಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚರಂಡಿ, ರಸ್ತೆಗಳ ನಿರ್ವಹಣೆ ಹೆಚ್ಚಿನ ಒತ್ತು ನೀಡಬೇಕು.ಚರಂಡಿ ಸ್ವಚ್ಚವಾಗಿ ಇಟ್ಟುಕೊಳ್ಳಬೇಕು.ಗುಂಡಿ ಬಿದ್ದ ರಸ್ತೆಗಳಿಗೆ ವೆಟ್ ಮಿಕ್ಸ್ ಹಾಕಿ ರಸ್ತೆಯಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ಪಿಡಿಓ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಅಪ್ಪಣ ಮಾತನಾಡಿ, ಈಗಾಗಲೇ ತಾಲ್ಲೂಕು ವ್ಯಾಪ್ತಿಯಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ
ಮಳೆಗಾಲದಲ್ಲಿ ಹೆಚ್ಚಿನ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.ಚರಂಡಿಗಳಲ್ಲಿ ನೀರು ಸರಗವಾಗಿ ಹರಿಯುವಂತೆ ಸ್ವಚ್ಚತೆ ಮಾಡಿಕೊಳ್ಳಬೇಕು. ದುಸ್ಥಿತಿಯಲ್ಲಿರುವ ವಾಸ ಮನೆಗಳನ್ನು ಗುರುತಿಸಿ ಅವರಿಗೆ ನೋಟಿಸ್ ನೀಡಬೇಕು ಎಂದು ತಿಳಿಸಲಾಗಿದೆ ಎಂದರು.
ಪ್ರಕೃತಿ ವಿಕೋಪ ಸಂಭವಿಸಿದಾಗ ಅಧಿಕಾರಿಗಳು ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಇದ್ದು, ಅವರ ಕೂಡಲೇ ಸಮಸ್ಯೆಗೆ ಸ್ಪಂದಿಸಬೇಕು ಎಂದು ತಿಳಿಸಲಾಗಿದೆ ಎಂದರು.
ಕುಶಾಲನಗರ
ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ,ಪ್ರತಿ ವರ್ಷ ಮಳೆಗಾಲದಲ್ಲಿ ನದಿ ಅಂಚಿನ ಮನೆಗಳಿಗೆ ಹಾನಿ ಉಂಟಾಗುತ್ತಿದೆ.ಆದ್ದರಿಂದ ನದಿ ಅಂಚಿನ ಅಸುರಕ್ಷಿತ ಮನೆಗಳನ್ನು ತೆರವುಗೊಳಿಸಿ ಅವರಿಗೆ ಪರ್ಯಾಯವಾಗಿ ಶಾಶ್ವತವಾದ ವಸತಿ ಯೋಜನೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯತಿ ಅಧಿಕಾರಿಗಳು ಕಂದಾಯ ಅಧಿಕಾರಿಗಳೊಂದಿಗೆ ಕೈಜೋಡಿಸಿ ಮಳೆಗಾಲದಲ್ಲಿ ಹೆಚ್ಚಿನ ಅನಾಹುತ ಸಂಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖೆಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಅಗತ್ಯ ಮಾಹಿತಿ ಹಾಗೂ ಅಂಕಿ-ಅಂಶಗಳನ್ನು ಸಭೆಯಲ್ಲಿ ಮಂಡಿಸಿದರು
ಸಭೆಯಲ್ಲಿ ತಾಲ್ಲೂಕು ತಹಸೀಲ್ದಾರ್ ಕೃಷ್ಣಮೂರ್ತಿ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ತಾಲ್ಲೂಕು ಮಟ್ಟದ ಅಧಿಕಾರಿಗಳು,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
Back to top button
error: Content is protected !!