ಕ್ರೀಡೆ
ಹೈದ್ರಾಬಾದ್ ನಲ್ಲಿ ನಡೆಯಲಿರುವ 4ನೇ ಸೆಸ್ಟೋಬಾಲ್ ಸಬ್-ಜೂನಿಯರ್ ನ್ಯಾಷನಲ್ ಚಾಂಪಿಯನ್ ಶಿಪ್: ರಾಜ್ಯ ತಂಡಕ್ಕೆ ಶುಭ ಹಾರೈಕೆ

ಕುಶಾಲನಗರ, ಮೇ 03: ಜಿಲ್ಲೆಯ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಜಯಗಳಿಸಬೇಕು. ಕ್ರೀಡಾ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಅವುಗಳನ್ನು ಬಳಸಿಕೊಳ್ಳಬೇಕು ಎಂದು ಕುಶಾಲನಗರ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆದಂ. ಎಸ್. ಕರೆ ನೀಡಿದರು.
ಹೈದ್ರಾಬಾದ್ ನಲ್ಲಿ ಮೇ 5 ರಿಂದ 7ರ ವರೆಗೆ ನಡೆಯಲಿರುವ
4ನೇ ಸೆಸ್ಟೋಬಾಲ್ ಸಬ್-ಜೂನಿಯರ್ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುತ್ತಿರುವ ಕರ್ನಾಟಕ ತಂಡದ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ರಾಷ್ಟ್ರ ಮಟ್ಟದ ಸೆಸ್ಟೋಬಾಲ್ ಕ್ರೀಡಾಕೂಟಕ್ಕೆ ಆಯ್ಕೆಯಾಗುವುದು ಪ್ರತಿಭಾವಂತ ಕ್ರೀಡಾಪಟುಗಳಿಗೆ ದೊಡ್ಡ ಗೌರವವಾಗಿದೆ.
ಶಾಲಾ ಮಟ್ಟದಿಂದಲೇ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕಿದೆ. ಆದರೆ ಇತ್ತೀಚೆಗೆ ಶಾಲೆಗಳಲ್ಲಿ ಕ್ರೀಡಾ ಚಟುವಟಿಕೆಗಳು ಕಡಿಮೆಯಾಗುತ್ತಿದೆ. ಹಲವು ಕಡೆಗಳಲ್ಲಿ ಆಟದ ಮೈದಾನವೇ ಇಲ್ಲದಾಗಿದೆ. ಕ್ರೀಡಾಪಟುಗಳು ಮೈದಾನದಲ್ಲಿ ಹೆಚ್ಚೆಚ್ಚು ಸಮಯ ಕಳೆದರೆ ಆರೋಗ್ಯ ತನ್ನಿಂದ ತಾನೇ ಸುಧಾರಿಸುತ್ತದೆ. ಸಮಾಜವೂ ಆರೋಗ್ಯದಿಂದ ಕೂಡಿರುತ್ತದೆ ಎಂದು ಆದಂ.ಎಸ್. ಅಭಿಪ್ರಾಯಪಟ್ಟರು.

ರಾಜ್ಯ ಪ್ರತಿನಿಧಿಸುವ ತಂಡದ ಸದಸ್ಯರಿಗೆ ಶಾಸಕ ಡಾ.ಮಂತರ್ ಗೌಡ ಅವರು ಒದಗಿಸಿದ ಸಮವಸ್ತವನ್ನು ಅವರ ಅನುಪಸ್ಥಿತಿಯಲ್ಲಿ ವೇದಿಕೆಯಲ್ಲಿದ್ದ ಗಣ್ಯರು ವಿತರಣೆ ಮಾಡಿದರು.
ರಾಷ್ಟ್ರಮಟ್ಟದಲ್ಲೂ ಸಾಧನೆ ಮೆರೆದು ಜಯಶೀಲರಾಗಲು ಶಾಸಕ ಡಾ. ಮಂತರ್ ಗೌಡ ದೂರವಾಣಿ ಮೂಲಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.



