ಕುಶಾಲನಗರ, ಫೆ 02 : ಕೊಡಗು ಜಿಲ್ಲೆಯ ಅರೆಸೇನಾಪಡೆಯ ನಿವೃತ್ತ ಯೋಧರ ಒಕ್ಕೂಟದ ಮನವಿ ಮೇರೆಗೆ ಮುಳ್ಳುಸೋಗೆಯಲ್ಲಿ ಗುರುತಿಸಿದ್ದ ಪೈಸಾರಿ ಜಾಗದಲ್ಲಿ ರಾತ್ರೋ ರಾತ್ರಿ ಖಾಸಗಿ ವ್ಯಕ್ತಿಯೊಬ್ಬರು ತಡೆಗೋಡೆ ನಿರ್ಮಿಸಿರುವುದನ್ನು ಖಂಡಿಸಿ, ತಡೆಗೋಡೆಯನ್ನು ತೆರವುಗೊಳಿಸಲು ಆಗ್ರಹಿಸಿ ಯೋಧರ ಒಕ್ಕೂಟದ ಪದಾಧಿಕಾರಿಗಳು ಸೋಮವಾರ ಪುರಸಭೆಗೆ ಧಾವಿಸಿದ್ದರು.
ತಡೆಗೋಡೆ ತೆರವಿಗೆ ತಿಂಗಳ ಹಿಂದೆಯೇ ಲಿಖಿತವಾಗಿ ದೂರು ನೀಡಿದ್ದರೂ ಕೂಡ ಪುರಸಭೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗದೇ ಅತಿಕ್ರಮಿಸಿಕೊಂಡಿರುವ ಖಾಸಗಿ ವ್ಯಕ್ಯಿಯ ಜೊತೆ ಶಾಮೀಲಾಗಿರುವ ಶಂಕೆ ಇರುವುದರಿಂದ ಮುಂದಿನ ಹತ್ತು ದಿನಗಳಲ್ಲಿ ತಡೆಗೋಡೆ ತೆರವು ಗೊಳಿಸಿ ಅರೆಸೇನಾಪಡೆಯ ಯೋಧರ ಒಕ್ಕೂಟಕ್ಕೆ ಮಂಜೂರು ಮಾಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಗಳ ಕಚೇರಿ ಬಳಿ ಅನಿರ್ದಿಷ್ಟ ಅವಧಿ ಪ್ರತಿಭಟನೆ ಹಾಗೂ ಚಳುವಳಿ ನಡೆಸುವುದಾಗಿ ಒಕ್ಕೂಟದ ಪದಾಧಿಕಾರಿಗಳು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಹಾಲೀ ಕರ್ತವ್ಯದಲ್ಲಿ ಇರುವ ಮತ್ತು ಈಗಾಗಲೇ ಕರ್ತವ್ಯ ಗೈದು ನಿವೃತ್ತಿ ಹೊಂದಿರುವ ಯೋಧರ ಸಂಖ್ಯೆ ಸುಮಾರು 5 ಸಾವಿರದಷ್ಟಿದ್ದು, ಇದೂವರೆಗೂ ಯೋಧರ ಹಿತರಕ್ಷಣೆಗಾಗಿ ಸ್ವಂತದ್ದಾದ ಸಂಘದ ಜಾಗವನ್ನು ಕೂಡ ಹೊಂದಲು ಸಾಧ್ಯವಾಗಿಲ್ಲ.
ಮಡಿಕೇರಿಯ ಮಹದೇವಪೇಟೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಛೇರಿ ತೆರೆದು ಕಾರ್ಯನಿರ್ವಹಿಸುತ್ತಿದ್ದೇವೆ.
ಈಗಾಗಲೇ ಮೃತ ಯೋಧರ ಪತ್ನಿಯರು ಹಾಗೂ ಕುಟುಂಬ ಸದಸ್ಯರ ಸಂಕಷ್ಟಗಳಿಗೆ ನೆರವಾಗುವ ಮೂಲಕ ಆ ಕುಟುಂಬಗಳಿಗೆ ಸರ್ಕಾರದ ಸವಲತ್ತುಗಳ ಮಾಹಿತಿ ನೀಡಲಾಗುತ್ತಿದೆ.
ಹಾಗಾಗಿ ಕುಶಾಲನಗರದ ಪುರಸಭಾ ವ್ಯಾಪ್ತಿಯ ಮುಳ್ಳುಸೋಗೆಯಲ್ಲಿ ನಾವುಗಳು ಈಗಾಗಲೇ 60 ಸೆಂಟುಗಳಷ್ಟು ಸರ್ಕಾರದ ಜಾಗವನ್ನು ಗುರುತಿಸಿದ್ದು
ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದು ಅರೆಸೇನಾಪಡೆಯ ಯೋಧರ ಒಕ್ಕೂಟದ ಅಧ್ಯಕ್ಷ ಎಂ.ಜಿ.ಯತೀಶ್, ಉಪಾಧ್ಯಕ್ಷ ಪುಲಿಯಂಡ ದೇವಯ್ಯ ಹಾಗೂ ಸಂಚಾಲಕ ಜಿ.ಕೆ.ದಿನೇಶ ಕುಮಾರ್ ವಿವರಿಸಿದರು. ಜಿಲ್ಲಾಧಿಕಾರಿಗಳು
ಖುದ್ದಾಗಿ ಸ್ಥಳ ಪರಿಶೀಲಿಸಿ ನಮಗೆ ಆ ಭೂಮಿಯನ್ನು ಮಂಜೂರಾತಿ ಮಾಡಿಕೊಡಬೇಕೆಂದು ಯೋಧರು ಆಗ್ರಹಿಸಿದರು.
ಈ ಸಂದರ್ಭ ಒಕ್ಕೂಟದ ಉಪಾಧ್ಯಕ್ಷರಾದ ನಿರ್ದೇಶಕರಾದ ಹರೀಶ್ ಕುಮಾರ್, ಜಿ.ಕೆ. ದಿನೇಶ್ ಕುಮಾರ್, ಬಿ.ಯು.ಲೋಕೇಶ್, ಎನ್.ಎಂ.ಭೀಮಯ್ಯ, ಲೀಲವೇಣಿ, ಗೋಪಾಲಕೃಷ್ಣ ಇದ್ದರು.
Back to top button
error: Content is protected !!