ಅವ್ಯವಸ್ಥೆ

ಮೂಲಭೂತ ಸೌಕರ್ಯ ವಂಚಿತ ದುಬಾರೆ ಹಾಡಿಯ ನಿವಾಸಿಗಳು: ಮುಖಂಡರ‌ ಹಾಡಿ ಭೇಟಿ

ಕುಶಾಲನಗರ, ಫೆ 01:ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ದುಬಾರೆ ಹಾಡಿ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಮನವಿ ಮಾಡಿಕೊಂಡಿದ್ದಾರೆ.

ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಲ್ಲಿ ವಾಸ, ಕುಡಿಯಲು ಶುದ್ದ ನೀರಿಲ್ಲ, ಸಮರ್ಪಕ ವಿದ್ಯುತ್ ಸೌಲಭ್ಯವಿಲ್ಲ, ಹಾಡಿಗೆ ಇರುವ ಅಂಗನವಾಡಿಗೆ ಶಿಕ್ಷಕರಿಲ್ಲ, ರಸ್ತೆ ಅವ್ಯವಸ್ಥೆಯಿಂದ ನಲುಗಿರುವ ಬಗ್ಗೆ ಹಾಡಿಯ ಮಾವುತ ಕವಾಡಿಗರು ಅಳಲು ತೋಡಿಕೊಂಡಿದ್ದಾರೆ.

ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾಧ್ಯಕ್ಷರೂ ಆದ ನಂಜರಾಯಪಟ್ಟಣ ಗ್ರಾಪಂ ಸದಸ್ಯ ಅರ್.ಕೆ.ಚಂದ್ರ ಅವರ ಮನವಿ ಮೇರೆಗೆ ಜಿಪಂ ಹಾಗೂ ಪಶ್ಚಿಮಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಮಾಜಿ ಅಧ್ಯಕ್ಷರಾದ ರವಿ ಕುಶಾಲಪ್ಪ ಹಾಡಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.

ಹಾಡಿಗೆ ಭೇಟಿ ನೀಡಿದ ಮುಖಂಡರೊಂದಿಗೆ ಸಮಸ್ಯೆಗಳನ್ನು ತೆರೆದಿಟ್ಟ ಮಾವುತ, ಕವಾಡಿಗರು ಹಾಗೂ ಹಾಡಿ ನಿವಾಸಿಗಳು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಹಾಡಿಯಲ್ಲಿ ಇದುವರೆಗೆ ಹಲವರಿಗೆ ಮನೆ ಮಂಜೂರಾಗಿಲ್ಲ. ಕೆಲವರಿಗೆ ಪಡಿತರ ಚೀಟಿ, ಐಡಿ ಕಾರ್ಡ್, ಆಧಾರ್ ಕಾರ್ಡ್ ಇಲ್ಲದ ಕಾರಣ ಮನೆ ಮಂಜೂರಾಗದೆ ಜೋಪಡಿಯಲ್ಲಿ ವಾಸವಿದ್ದಾರೆ. ರಾತ್ರಿ ವೇಳೆ ತುರ್ತು ಪರಿಸ್ಥಿತಿ ಸಂದರ್ಭ ಸಿದ್ದಾಪುರ, ಮಡಿಕೇರಿ ಗೆ ತೆರಳಲು ಇರುವ ಕಾಡೊಳಗಿನ ದುಬಾರೆ-ಮಾಲ್ದಾರೆ ಸಂಪರ್ಕ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ರೋಗಿಗಳನ್ನು ಸಾಗಿಸುವ ಸಂದರ್ಭ ಮಾರ್ಗ ಮಧ್ಯೆ ಜೀವ ಬಿಟ್ಟ ಪ್ರಸಂಗ ಕೂಡ ನಡೆದಿದೆ. ಮಳೆಗಾಲದಲ್ಲಿ ಮನೆಗಳು ಶಿಥಿಲಗೊಳ್ಳುತ್ತದೆ, ಮನೆಗಳಿಗೆ ಸಮರ್ಪಕವಾದ ಸಂಪರ್ಕ ರಸ್ತೆಯಿಲ್ಲ, ಒಂದೂವರೆ ವರ್ಷದಿಂದ ಅಂಗನವಾಡಿಗೆ ಶಿಕ್ಷಕರಿಲ್ಲ ಎಂದು ದುಬಾರೆ ಹಾಡಿ ಮುಖಂಡ ಜೆ.ಕೆ.ಡೋಬಿ, ಆನೆ ಮಾವುತರಾದ ಜೆ.ಟಿ.ಈರ, ಜೆ.ಡಿ.ವಿಜಯ, ಭಾಸ್ಕರ, ಚಿನ್ನಪ್ಪ, ಕುಮಾರ ಮಾಹಿತಿ ನೀಡಿದರು.

ರಸ್ತೆ ದುಸ್ಥಿತಿ

ಈ ಸಂದರ್ಭ ದೂರವಾಣಿ ಮೂಲಕ ಐಟಿಡಿಪಿ ಅಧಿಕಾರಿಗಳನ್ನು ಸಂಪರ್ಕಿಸಿದ ರವಿ ಕುಶಾಲಪ್ಪ ಅವರು, ಸಮಸ್ಯೆಗಳ ಬಗ್ಗೆ ವಿಚಾರಿಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಹಾಡಿಗೆ ಕರೆಸಿ ಗ್ರಾಮ ಸಂಪರ್ಕ ಸಭೆ ನಡೆಸಲು ಕ್ರಮವಹಿಸುವಂತೆ ಸೂಚಿಸಿದರು.

ಮೇಲ್ನೋಟಕ್ಕೆ ಇಲ್ಲಿ ಸರಕಾರದ ಯೋಜನೆಗಳು ದುರುಪಯೋಗವಾಗಿರುವ ಬಗ್ಗೆ ಅನುಮಾನವಿದೆ.
ಜಿಲ್ಲೆಯಾದ್ಯಂತ ಇರುವ ಎಲ್ಲಾ ಹಾಡಿಗಳಿಗೆ ಭೇಟಿ ನೀಡಿ ವಸ್ತಸ್ಥಿತಿ ಅರಿಯುವ ಪ್ರಯತ್ನ ನಡೆಸಲಾಗುವುದು ಎಂದು ರವಿ ಕುಶಾಲಪ್ಪ ಅವರು ತಿಳಿಸಿದರು.

ಮೈಸೂರು ದಸಾರಾಗೆ ಆನೆಗಳನ್ನು ಕೊಂಡೊಯ್ಯುವ ದುಬಾರೆ ಮಾವುತ ಕವಾಡಿಗರ ಬದುಕು ಶೋಚನೀಯ ಸ್ಥಿತಿಯಲ್ಲಿದ್ದರೂ ಅಗತ್ಯ ಮೂಲ ಸೌಲಭ್ಯ ಒದಗಿಸಲು ಸರಕಾರ ವಿಫಲವಾಗಿದೆ. ದುಬಾರೆ ಹಾಡಿಯ ಜೇನು ಕುರುಬ ನಿವಾಸಿಗಳು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಆರ್.ಕೆ.ಚಂದ್ರ ಎಚ್ಚರಿಸಿದರು.

ಈ ಸಂದರ್ಭ ಕುಶಾಲನಗರ ಎಪಿಎಂಸಿ ಮಾಜಿ ಉಪಾಧ್ಯಕ್ಷ ಸಿ.ಪಿ.ವಿಜಯ ಜತ್ತ, ಕವಾಡಿಗರಾದ ಮಣಿ, ಸುರೇಶ, ಪಾಪು, ರಾಜ, ಮಂಜು, ಶಿವು, ಸಂತೋಷ, ರಂಜನ್, ಜಗದೀಶ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!