ಕುಶಾಲನಗರ, ಆ 29: ಹಲವು ಸಮಸ್ಯೆಗಳ ನಡುವೆಯೂ ಹೆಬ್ಬಾಲೆ ಗ್ರಾಮದ ಅಭಿವೃದ್ಧಿಗೆ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಗ್ರಾಪಂ ಅಧ್ಯಕ್ಷೆ ಹೆಚ್.ಪಿ.ಅರುಣಕುಮಾರಿ ತಿಳಿಸಿದರು.
ಪಂಚಾಯಿತಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ಒಂದು ವರ್ಷ ವಾಗಿದೆ. ಆರಂಭದಲ್ಲಿ ಅನುದಾನ ಕೊರತೆಯಿತ್ತು. ಖಾತೆಯಲ್ಲಿ ಹಣವಿಲ್ಲದ ಕಾರಣ ಆರಂಭದಲ್ಲಿ ಅಭಿವೃದ್ಧಿ ಕುಂಠಿತವಾಗಿತ್ತು.
ಸಣ್ಣ ಪ್ರಮಾಣದ ಕಾಮಗಾರಿಯಿಂದ ಆರಂಭಿಸಿ ಹಂತಹಂತವಾಗಿ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ಮುಂದಾಗಿದ್ದೇವೆ. ಆದರೆ ಖಾಯಂ ಪಿಡಿಒ ಇಲ್ಲದೆ ತೀವ್ರ ಸಮಸ್ಯೆ ತಲೆದೋರಿದೆ. ಹಿಂದಿನ ಪಿಡಿಓ ರಾಕೇಶ್ ಅವರ ನಂತರ ಬಂದ ಅಸ್ಮಾ ಅವರು ಕೂಡ ಹೆಚ್ಚು ಕಾಲ ನಿಲ್ಲದೆ ವರ್ಗಾವಣೆ ಪಡೆದುಕೊಂಡರು. ಸದಸ್ಯರ ನಡುವೆ ಗೊಂದಲ ಕಾರಣ ಅಧಿಕಾರಿಗಳು ನಿಲ್ಲುತ್ತಿಲ್ಲ. ಖಾಯಂ ಪಿಡಿಯೋಗಾಗಿ ಹಲವು ಬಾರಿ ಸಂಬಂಧಿಸಿದವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿಂದೆ ಇದ್ದ ಓರ್ವ ಪಿಡಿಒ ಸದಸ್ಯರ ನಡುವೆ ಬಿರುಕು ಉಂಟು ಮಾಡಿದರು. ಸಭೆಯ ನಿರ್ಣಯದಂತೆ ಸಮರ್ಪಕವಾಗಿ ಕಾಮಗಾರಿಗಳು ಕೈಗೊಂಡಿಲ್ಲ.
15ನೇ ಹಣಕಾಸು ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲು ಕೂಡ ಕ್ರಮವಹಿಸಿಲ್ಲ. ವಿರೋಧ ಪಕ್ಷದ ಸದಸ್ಯರು ಅಭಿವೃದ್ಧಿಗೆ ನಿರಂತರವಾಗಿ ತೊಡಕು ಉಂಟುಮಾಡುತ್ತಿರುವ ಕಾರಣ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಆರೋಪಿಸಿದರು.
ಪಕ್ಷಬೇಧ ಮರೆತು ಗ್ರಾಮದ ಹಿತದೃಷ್ಟಿಯಿಂದ ಒಗ್ಗೂಡಿ ಕಾರ್ಯನಿರ್ವಹಿಸುವಂತಾಗಬೇಕು. ಜನರ ನಡುವೆ ಗ್ರಾಪಂ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿದೆ. ವೈಯಕ್ತಿಕ ವಿರೋಧ ಬದಿಗೊತ್ತಿ ಗ್ರಾಮದ ಜನರಿಗಾಗಿ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ಗ್ರಾಪಂ ಉಪಾಧ್ಯಕ್ಷೆ ಲತಾ ಮಾತನಾಡಿ, ಕೆಲವ ಸದಸ್ಯರು, ಹಿಂದಿನ ಅಧ್ಯಕ್ಷರಿಂದ ಸೂಕ್ತ ಸ್ಪಂದನೆ ದೊರೆಯದೆ ಆಡಳಿತ ವ್ಯವಸ್ಥೆಯಲ್ಲಿ ಗೊಂದಲ ಉಂಟಾಗಿದೆ. ಪೌರಕಾರ್ಮಿಕರ ಕೊರತೆಯಿಂದ ಸ್ವಚ್ಚತಾ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದ್ದು ಗ್ರಾಮಸ್ಥರು ಸಹಕರಿಸುವಂತೆ ಕೋರಿದರು.
ಸದಸ್ಯ ಪರಮೇಶ್ ಮಾತನಾಡಿ, ಇಒ ಅವರ ಮಾರ್ಗದರ್ಶನದಲ್ಲಿ ಮುಂದಿನ ದಿನಗಳಲ್ಲಿ ಜನರಿಗೆ ಅನ್ಯಾಯ ಆಗದಂತೆ ಕೆಲಸ ನಿರ್ವಹಿಸಲಾಗುವುದು ಎಂದರು.
ಈ ಸಂದರ್ಭ ಗ್ರಾಪಂ ಸದಸ್ಯರಾದ ಚಂದ್ರಶೇಖರ್ ಜೋಗಿ, ಪವಿತ್ರಾ ಇದ್ದರು.
Back to top button
error: Content is protected !!