ಕಾರ್ಯಕ್ರಮ
ಕುಶಾಲನಗರ ತಾಲೂಕು ಸವಿತಾ ಸಮಾಜದ ಕಟ್ಟಡ ಶುಭಾರಂಭ

ಕುಶಾಲನಗರ, ಆ 23: ಕುಶಾಲನಗರ ತಾಲೂಕು ಸವಿತಾ ಸಮಾಜದ ಕಟ್ಟಡ ಶುಭಾರಂಭ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಸುಂದರ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ನಿರ್ಮಿಸಿರುವ ನೂತನ ಕಟ್ಟಡದಲ್ಲಿ ಗಣಪತಿ ಹೋಮದೊಂದಿಗೆ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ ಕಟ್ಟಡ ಕಾರ್ಯಾರಂಭಕ್ಕೆ ಚಾಲನೆ ನೀಡಲಾಯಿತು.
ಸಂಘದ ಕೊಡಗು ಜಿಲ್ಲಾಧ್ಯಕ್ಷ ದೊರೇಶ್ ನೂತನ ಕಟ್ಟಡ ಉದ್ಘಾಟಿಸಿದರು.
ಶ್ರೀ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ದೊರೇಶ್, ಸಮಾಜದ ಬಾಂಧವರ ಸಹಕಾರದಿಂದ ಸಣ್ಣದಾಗಿ ನಿರ್ಮಿಸಿರುವ ಈ ಕಟ್ಟಡ ಮುಂದಿನ ದಿನಗಳಲ್ಲಿ ಬೃಹತ್ ಭವನ ನಿರ್ಮಾಣ ಮಾಡುವಲ್ಲಿ ಪ್ರಯತ್ನ ಅಗತ್ಯ. ಸರಕಾರದ ಅನುದಾನಗಳನ್ನು ಪಡೆದು ಕಟ್ಟಡವನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಯತ್ನಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲಾ ರೀತಿಯಲ್ಲಿ ಶ್ರಮವಹಿಸಲಾಗುವುದು. ಹಿರಿಯರ ಸಹಕಾರದಿಂದ ಸಂಘಟಿತರಾಗಿ ಈ ಒಂದು ಪ್ರಯತ್ನಕ್ಕೆ ಮುಂದಾಗಿರುವ ಸಮಾಜ ಬಾಂಧವರು ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢರಾಗಲು ಸರಕಾರದ ಯೋಜನೆಗಳ ಬಗ್ಗೆ ಅರಿತುಕೊಳ್ಳುವ ಅಗತ್ಯವಿದೆ ಎಂದರು.





